
ಇರಾನ್ ಪ್ರತಿಭಟನೆ
(ರಾಯಿಟರ್ಸ್ ಚಿತ್ರ)
ಟೆಹರಾನ್: ಇರಾನ್ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ 2,500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ಹೇಳಿದೆ.
ಅಲ್ಲದೆ 18 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಹೊರತಾಗಿಯೂ ಬಂಧನಕ್ಕೊಳಗಾದವರ ತ್ವರಿತ ವಿಚಾರಣೆಗೆ ಒಳಪಡಿಸಿ ಗಲ್ಲು ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇರಾನ್ ನ್ಯಾಯಾಂಗದ ಮುಖ್ಯಸ್ಥರು ಸೂಚನೆ ನೀಡಿದ್ದಾರೆ.
ಇರಾನ್‌ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, 1979ರ ಕ್ರಾಂತಿಯನ್ನು ನೆನಪಿಸುವಂತಿದೆ. ಪ್ರತಿಭಟನೆ ಹತ್ತಿಕ್ಕಲು ಯತ್ನಿಸಿದರೆ ಕ್ರಮ ಕೈಗೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದರು. ಇದರಿಂದಾಗಿ ಇರಾನ್ ಮೇಲೆ ಅಮೆರಿಕ ದಾಳಿ ನಡೆಸಬಹುದೇ ಎಂಬ ಆತಂಕ ಮಡುಗಟ್ಟಿದೆ.
ಒಂದು ವೇಳೆ ದಾಳಿ ನಡೆಸಿದರೆ ಪ್ರತಿದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ. ಅಮೆರಿಕದ ನೆಲೆ ಹೊಂದಿರುವ ಪ್ರಾದೇಶಿಕ ದೇಶಗಳ ಮೇಲೂ ದಾಳಿ ನಡೆಸುವುದಾಗಿ ಹೇಳಿದೆ.
ಇಂದು (ಬುಧವಾರ) ಇರಾನ್ ಪ್ರತಿಭಟನೆಯಲ್ಲಿ ಮೃತಪಟ್ಟಿರುವ ಸುಮಾರು 100 ಮಂದಿ ಭದ್ರತಾ ಸಿಬ್ಬಂದಿಯ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಂತ್ಯಕ್ರಿಯೆಯಲ್ಲಿ ಸುಮಾರು 10 ಸಾವಿರ ಮಂದಿ ಭಾಗವಹಿಸಿ ಇರಾನ್ ಧ್ವಜ ಹಾಗೂ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರ ಚಿತ್ರವನ್ನು ಹಿಡಿದುಕೊಂಡು ಶೋಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಏತನ್ಮಧ್ಯೆ ಇರಾನ್ ಬಿಟ್ಟು ಹೋಗುವಂತೆ ತನ್ನ ನಾಗರಿಕರಿಗೆ ಇರಾನ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿ ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.