
ಇರಾನ್
ದುಬೈ: ಇರಾನ್‌ನಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿಸಂಸ್ಥೆಯೊಂದು ಈ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ಒಂದು ವಾರದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ 1200ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.
29 ಪ್ರತಿಭಟನಕಾರರು, 4 ಮಕ್ಕಳು ಮತ್ತು ಇರಾನ್ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಇರಾನ್‌ನ ಒಟ್ಟು 31 ಪ್ರಾಂತ್ಯಗಳಲ್ಲಿ 27 ಪ್ರಾಂತ್ಯಗಳ 250 ಸ್ಥಳಗಳಿಗೆ ಪ್ರತಿಭಟನೆ ವ್ಯಾಪಿಸಿದೆ ಎಂದು ಸುದ್ದಿಸಂಸ್ಥೆ ತಿಳಿಸಿದೆ.
250 ಪೊಲೀಸರು ಮತ್ತು ಬಸೀಜ್ ಪಡೆಯ 45 ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಇರಾನ್ ಅರೆಸೇನಾ ಪಡೆಗೆ ಆಪ್ತವಾಗಿರುವ ಸುದ್ದಿ ಸಂಸ್ಥೆ ‘ಫಾರ್ಸ್’ ವರದಿ ಮಾಡಿದೆ. ಈ ಬಗ್ಗೆ ಇರಾನ್ ಸರ್ಕಾರ ಈವರೆಗೆ ಮಾಹಿತಿ ನೀಡಿಲ್ಲ.
ಆಸ್ಪತ್ರೆ ಮೇಲೆ ದಾಳಿ: ಇಲಾಮ್ ಪ್ರಾಂತ್ಯದಲ್ಲಿನ ಆಸ್ಪತ್ರೆಯೊಂದರ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿರುವುದನ್ನು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಒಪ್ಪಿಕೊಂಡಿದ್ದಾರೆ.
ಇಲಾಮ್ ಪ್ರಾಂತ್ಯದಲ್ಲಿ ನಾಗರಿಕರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂಬ ಆರೋಪಗಳ ಕುರಿತ ತನಿಖೆಗೆ ವಿಶೇಷ ತಂಡ ರಚಿಸುವಂತೆಯೂ ಗೃಹ ಸಚಿವಾಲಯಕ್ಕೆ ಪೆಜೆಶ್ಕಿಯಾನ್ ಆದೇಶಿಸಿದ್ದಾರೆ.
ಭದ್ರತಾ ಪಡೆಗಳು ನಾಗರಿಕರ ಮೇಲೆ ಗುಂಡು ಹಾರಿಸಿವೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಭಾರತೀಯ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ...
ವ್ಯಾಪಕ ಪ್ರತಿಭಟನೆ ಹಿನ್ನೆಲೆಯಲ್ಲಿ ಇರಾನ್‌ಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಭಾರತೀಯ ವಿದೇಶಾಂಗ ಸಚಿವಾಲಯವು ಪ್ರಯಾಣಿಕರಿಗೆ ನಿರ್ದೇಶನವನ್ನು ನೀಡಿದೆ.
ಇತ್ತೀಚಿನ ಬೆಳವಣಿಗೆಗಳ ಗಮನದಲ್ಲಿಟ್ಟುಕೊಂಡು, ಮುಂದಿನ ಸೂಚನೆಯವರೆಗೂ ಭಾರತೀಯ ನಾಗರಿಕರೂ ಇಸ್ಲಾಮಿಕ್ ಗಣರಾಜ್ಯದಲ್ಲಿ ಆಗುತ್ತಿರುವ ಪ್ರತಿಭಟನೆಗಳ ಬಗ್ಗೆ ಜಾಗರೂಕವಾಗಿರುವಂತೆ ಎಚ್ಚರಿಸಲಾಗಿದೆ.
ಇರಾನ್ ವೀಸಾ ಹೊಂದಿರುವ ಭಾರತೀಯರು ಆದಷ್ಟು ಬೇಗನೆ ಭಾರತೀಯ ರಾಯಭಾರ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ವಿನಂತಿಸಲಾಗಿದೆ.
ಮೂಲಗಳ ಪ್ರಕಾರ ಇರಾನ್‌ನಲ್ಲಿ 10 ಸಾವಿರ ಭಾರತೀಯ ನಾಗರಿಕರು ಇದ್ದಾರೆ.
ಅಮೆರಿಕ ಮಧ್ಯಪ್ರವೇಶ ಸಾಧ್ಯತೆ
ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ನೇತೃತ್ವದ ಸರ್ಕಾರವು ಪ್ರತಿಭಟನಾಕಾರರ ಮೇಲೆ ಹಿಂಸೆ ನಡೆಸಿದರೆ ನಾವು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದರು. ಆದರೆ ತನ್ನ ಆಂತರಿಕ ವಿಷಯದಲ್ಲಿ ಕೈಹಾಕುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಇರಾನ್ ತಿರುಗೇಟು ನೀಡಿತ್ತು.
ಪ್ರತಿಭಟನೆಗೆ ಕಾರಣ ಏನು?
ಆರ್ಥಿಕತೆ ಕುಸಿತ,
ಹಣದುಬ್ಬರ,
ಅಗತ್ಯ ವಸ್ತುಗಳ ಬೆಲೆ ಏರಿಕೆ,
ನಿರುದ್ಯೋಗ ಸಮಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.