ಟೆಹರಾನ್/ ಜೆರುಸಲೇಂ/ ಮಾಸ್ಕೊ: ಇಸ್ರೇಲ್–ಇರಾನ್ ಯುದ್ಧವು ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ತನ್ನ ಮೂರು ಪರಮಾಣು ಘಟಕಗಳ ಮೇಲೆ ಅಮೆರಿಕವು ಭಾನುವಾರ ದಾಳಿ ನಡೆಸಿದ್ದಕ್ಕಾಗಿ ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡುವುದಾಗಿ ಇರಾನ್ ಹೇಳಿದೆ. ಅಮೆರಿಕದ ದಾಳಿ ಬಳಿಕ ಇಸ್ರೇಲ್ ಮತ್ತು ಇರಾನ್ ದೇಶಗಳು ಪರಸ್ಪರರ ಮೇಲೆ ಸೋಮವಾರ ದಾಳಿ ತೀವ್ರಗೊಳಿಸಿವೆ. ಜಲಸಂಧಿಯನ್ನು ಬಂದ್ ಮಾಡಿರುವ ಕಾರಣ ಕಚ್ಚಾ ತೈಲ ಸಾಗಟಕ್ಕೆ ಭಾರಿ ಹೊಡೆದ ಬಿದ್ದಿದೆ. ಇದರಿಂದ ಆರ್ಥಿಕತೆಗೆ ಆಗುವ ನಷ್ಟದ ಬಗ್ಗೆ ಚೀನಾ ಮತ್ತು ಐರೋಪ್ಯ ದೇಶಗಳ ಒಕ್ಕೂಟ ಕಳವಳ ವ್ಯಕ್ತಪಡಿಸಿವೆ.
ದಾಳಿ ತೀವ್ರಗೊಳಿಸಿದ ಎರಡೂ ದೇಶಗಳು
ಇರಾನ್ ರಾಜಧಾನಿ ಟೆಹರಾನ್ ಹಾಗೂ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಲ್ಲಿ ಸೋಮವಾರ ಬಹಳ ಹೊತ್ತಿನವರೆಗೆ ಸೈರನ್ ಸದ್ದು ಮೊಳಗಿದೆ. ಎರಡೂ ದೇಶದ ರಾಜಧಾನಿಗಳಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಸಿದೆ. ತಕ್ಷಣವೇ ಬಂಕರ್‌ಗಳಲ್ಲಿ ಅಡಗಿಕೊಳ್ಳುವಂತೆ ಈ ಎರಡೂ ಪ್ರದೇಶಗಳ ಜನರನ್ನು ಅಲ್ಲಿನ ಸರ್ಕಾರಗಳು ಮನವಿ ಮಾಡಿದವು.
ಇಸ್ರೇಲ್‌ನ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಜನರು ತಮ್ಮ ಈಜುಡುಗೆಯಲ್ಲಿಯೇ ಬಂಕರ್‌ಗಳಿಗೆ ಓಡಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಅಮೆರಿಕವು ಇರಾನ್‌ನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿದ ಬಳಿಕ, ಇಲ್ಲಿನ ಜನರು ಭಯಭೀತರಾಗಿದ್ದಾರೆ’ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇರಾನ್‌ನ ಸರ್ಕಾರಿ ಕಚೇರಿ ಹಾಗೂ ಇರಾನ್‌ನ ಸರ್ವೋಚ್ಛ ನಾಯಕ ಖಮೇನಿ ಅವರ ರೆವಲ್ಯೂಷನರಿ ಗಾರ್ಡ್‌ನ (ಅರೆ ಸೇನಾ ಪಡೆ ಇದ್ದಂತೆ) ಕೇಂದ್ರ ಕಚೇರಿ ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಸೋಮವಾರ ದಾಳಿ ನಡೆಸಿದೆ. ಟೆಹರಾನ್‌ನ ವಿದ್ಯುತ್ ಸಂಪರ್ಕದ ಕೇಂದ್ರ ಮೂಲಸೌಕರ್ಯದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇದು ಯಾವ ಪ್ರದೇಶ ಎನ್ನುವ ಬಗ್ಗೆ ಇರಾನ್ ಸ್ಪಷ್ಟ ಮಾಹಿತಿ ಹಂಚಿಕೊಂಡಿಲ್ಲ.
ಹೈಫಾ ಮತ್ತು ಟೆಲ್ ಅವೀವ್ ಮೇಲೆ ಇರಾನ್ ಭಾರಿ ಕ್ಷಿಪಣಿ ದಾಳಿ ನಡೆಸಿದೆ. ರಸ್ತೆಯ ಪಕ್ಕವೇ ಕ್ಷಿಪಣಿಯೊಂದು ಬಿದ್ದು, ಕಲ್ಲುಗಳು ಕಾರಿನ ಮೇಲೆ ಬಿದ್ದ ದೃಶ್ಯ ಇರುವ ವಿಡಿಯೊವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೆರುಸಲೇಂ ಮೇಲೆ ಕೂಡ ಇರಾನ್ ದಾಳಿ ನಡೆಸಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಇಸ್ರೇಲ್ ಮಾಹಿತಿ ನೀಡಿಲ್ಲ.
ಎವಿನ್ ಕಾರಾಗೃಹದ ಮೇಲೆ ದಾಳಿ
ಟೆಹರಾನ್‌ನಲ್ಲಿರುವ ಎವಿನ್ ಕಾರಾಗೃಹದ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಖಮೇನಿ ಮತ್ತು ಇಲ್ಲಿನ ಸರ್ಕಾರದ ವಿರುದ್ಧ ಇರುವ ರಾಜಕೀಯ ಕೈದಿಗಳನ್ನು ಇರಿಸಿರುವ ಕಾರಾಗೃಹ ಇದಾಗಿದೆ. ‘ಕಾರಾಗೃಹದ ಗೇಟ್ ಬಳಿ ದಾಳಿ ನಡೆಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ’ ಎಂದು ಇರಾನ್ ಹೇಳಿದೆ.
‘ನಾವು ಹೇರಿರುವ ನಿರ್ಬಂಧ ಸಂಬಂಧ ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ನಮ್ಮ ದೇಶದ ಜನರನ್ನು ಇರಾನ್ ಈ ಕಾರಾಗೃಹದಲ್ಲಿ ಇರಿಸಿಕೊಳ್ಳುತ್ತದೆ’ ಎಂದು ಅಮೆರಿಕ ಮತ್ತು ಐರೋಪ್ಯ ದೇಶಗಳು ಆರೋಪಿಸುತ್ತವೆ.
‘ದಾಳಿಯ ಮೂಲಕ ಕೈದಿಗಳ ಮನೋಸ್ಥೈರ್ಯವನ್ನು ಕುಗ್ಗಿಸಲಾಗುತ್ತಿದೆ’ ಫ್ರಾನ್ಸ್‌ನ ಕೈದಿಯೊಬ್ಬರ ಸಹೋದರಿಯೊಬ್ಬರು ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಐರೋಪ್ಯ ದೇಶಗಳ ಸುಮಾರು 20 ಜನರು ಈ ಕಾರಾಗೃಹದಲ್ಲಿ ಇದ್ದಾರೆ ಎಂದು ‘ಇರಾನ್‌ವೈರ್’ ಎನ್ನುವ ಪತ್ರಿಕೆ ವರದಿ ಮಾಡಿದೆ.
ಟ್ರಂಪ್ ಅವರ ‘ಮಿಗಾ’ ಘೋಷಣೆ
‘ಆಡಳಿತದಲ್ಲಿ ತಲ್ಲಣ ಸೃಷ್ಟಿಸಲು ಆಡಳಿತಕಾರರಲ್ಲಿ ನಡುಕ ಹುಟ್ಟಿಸಲು ನಮ್ಮ ಆಡಳಿತಕ್ಕೆ ಸಂಬಂಧಿಸಿದ ಕಚೇರಿಗಳ ಮೇಲೆಯೇ ದಾಳಿ ನಡೆಸಲಾಗಿದೆ’ ಎಂದು ಇರಾನ್‌ನ ಕೆಲವು ಅಧಿಕಾರಿಗಳು ಹೇಳುತ್ತಿದ್ದಾರೆ. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರ ಪೋಸ್ಟ್ ಕೂಡ ಕಾರಣ ಎನ್ನಲಾಗಿದೆ.
‘ಇರಾನ್ ಅನ್ನು ಮತ್ತೊಮ್ಮೆ ಶ್ರೇಷ್ಠವಾಗಿಸಲು (ಮೇಕ್ ಇರಾನ್ ಗ್ರೇಟ್ ಅಗೇನ್–ಎಂಐಜಿಎ (ಮಿಗಾ) ಇರಾನ್ ಸರ್ಕಾರಕ್ಕೆ ಸಾಧ್ಯವಾಗದೇ ಇದ್ದರೆ, ಯಾಕಾಗಿ ನಾವು ಇರಾನ್ ಸರ್ಕಾರವನ್ನು ಬದಲು ಮಾಡಬಾರದು?’ ಎಂದು ಟ್ರಂಪ್ ತಮ್ಮ ‘ಟ್ರುಥ್ ಸೋಷಿಯಲ್’ ವೇದಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಪದೇ ಪದೇ ಬೆದರಿಕೆ ಒಡ್ಡುವ ಇರಾನ್
ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡುತ್ತೇವೆ ಎನ್ನುವ ಬೆದರಿಕೆಯನ್ನು ತನ್ನ ದಾಳವಾಗಿ ಇರಾನ್ ಹಿಂದಿನಿಂದಲೂ ಬಳಸಿಕೊಳ್ಳುತ್ತಲೇ ಬಂದಿದೆ. ಈಗ ಅಮೆರಿಕ ತನ್ನ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಜಲಸಂಧಿಯನ್ನು ಬಂದ್ ಮಾಡುತ್ತೇವೆ ಎಂದು ಮತ್ತೊಮ್ಮೆ ಇರಾನ್ ಗುಡುಗಿದೆ. ಈ ವಿಚಾರವಾಗಿ ಮತ್ತೊಮ್ಮೆ ಯೋಚಿಸುವಂತೆ ಇರಾನ್‌ಗೆ ಹೇಳಬೇಕು. ಈ ಬಗ್ಗೆ ಸಹಾಯ ಮಾಡಬೇಕು ಎಂದು ಅಮೆರಿಕವು ಚೀನಾಕ್ಕೆ ಮನವಿ ಮಾಡಿದೆ.
ದಾಳಿ ಒಪ್ಪಲಾಗದು: ರಷ್ಯಾ
ಇರಾನ್‌ನ ಪರಮಾಣು ಘಟಕಗಳ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ರಷ್ಯಾ ಖಂಡಿಸಿದ್ದು, ಇದು ‘ಅಪ್ರಚೋದಿತ ಆಕ್ರಮಣ’ ಎಂದು ಹೇಳಿದೆ.
‘ಇರಾನ್ ಮೇಲೆ ನಡೆದಿರುವ ಅಪ್ರಚೋದಿತ ದಾಳಿಗೆ ಯಾವುದೇ ಸಮರ್ಥನೆ ಇಲ್ಲ. ದಾಳಿಯನ್ನು ಒಪ್ಪಲಾಗದು’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದರು.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಸೋಮವಾರ ಮಾಸ್ಕೊದಲ್ಲಿ ರಷ್ಯಾ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಪುಟಿನ್ ಹೇಳಿಕೆ ಹೊರಬಿದ್ದಿದ್ದು, ಇರಾನ್‌ಗೆ ರಷ್ಯಾದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.
ಇರಾನ್ ಜತೆಗಿನ ದೀರ್ಘಕಾಲದ ವಿಶ್ವಾಸಾರ್ಹ ಸಂಬಂಧವನ್ನು ಉಲ್ಲೇಖಿಸಿದ ಅವರು, ‘ಇರಾನ್ ಜನರಿಗೆ ಸಹಾಯ ಮಾಡಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದೇವೆ’ ಎಂದರು. ಆದರೆ, ಇರಾನ್‌ಗೆ ಸೇನಾ ನೆರವು ಒದಗಿಸುವ ಕುರಿತು ಪುಟಿನ್ ಯಾವುದೇ ಹೇಳಿಕೆ ನೀಡಲಿಲ್ಲ.
ಇರಾನ್– ಇಸ್ರೇಲ್ ನಡುವೆ ಜೂನ್ 13ರಂದು ಸಂಘರ್ಷ ಆರಂಭವಾದಾಗಿನಿಂದಲೂ, ಇರಾನ್‌ಗೆ ಮಿಲಿಟರಿ ಸಹಾಯ ನೀಡುವ ಬಗ್ಗೆ ರಷ್ಯಾ ಬಹಿರಂಗವಾಗಿ ಯಾವುದೇ ಹೇಳಿಕೆ ಕೊಟ್ಟಿಲ್ಲ. ಇಸ್ರೇಲ್ ಮತ್ತು ಅಮೆರಿಕದ ದಾಳಿಯನ್ನು ಖಂಡಿಸಿದ್ದಕ್ಕೆ ಅರಾಗ್ಚಿ ಅವರು ರಷ್ಯಾಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಕಾಸ್‌ವಿಸ್ಡಂ ಲೇಕ್ ಎನ್ನುವ ದೈತ್ಯ ತೈಲ ಸಾಗಣೆ ಹಡಗು ಭಾನುವಾರ ಹೊರ್ಮುಜ್ ಜಲಸಂಧಿಯನ್ನು ತಲುಪಿತ್ತು. ಸೋಮವಾರ ಈ ಹಡಗು ಯುಎಇ ದೇಶದ ಬಂದರುವೊಂದಕ್ಕೆ ವಾಪಸ್ ಬಂದಿದೆ
ಸೌತ್ ಲಾಯಲ್ಟಿ ಎನ್ನುವ ದೈತ್ಯ ಹಡಗು ಕೂಡ ಸೋಮವಾರ ಜಲಸಂಧಿ ಬಳಿ ಹೋಗಲೇ ಇಲ್ಲ. ಇರಾಕ್‌ನಲ್ಲಿ ಈ ಹಡಗು ತೈಲವನ್ನು ತುಂಬಿಸಿಕೊಳ್ಳಬೇಕಿತ್ತು
ಯುದ್ಧವು ತೀವ್ರಗೊಳ್ಳುತ್ತಿದೆ. ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಇರಾನ್‌ನ ನಿರ್ಧಾರವು ತೀವ್ರ ಭಯಾನಕವಾಗಿ ಪರಿಣಮಿಸಬಹುದು. ಇದು ಯಾರಿಗೂ ಒಳ್ಳೆಯದಲ್ಲಕಾಜಾ ಕಲ್ಲಾಸ್, ಐರೋಪ್ಯ ಒಕ್ಕೂಟದ ಹಿರಿಯ ಅಧಿಕಾರಿ
ಇರಾನ್ ಮತ್ತು ಇಸ್ರೇಲ್‌ನ ಯುದ್ಧದ ಪರಿಣಾಮವು ಆಯಾ ದೇಶಗಳಿಗೆ ಅಷ್ಟೇ ಅಲ್ಲದೇ, ಇತರೆ ದೇಶಗಳಿಗೂ ಹರಡದಂತೆ ಆಗಬೇಕು. ತಕ್ಷಣವೇ ಕದನ ವಿರಾಮ ಘೋಷಿಸಬೇಕು. ಅಂತರರಾಷ್ಟ್ರೀಯ ಸಮುದಾಯವು ಈ ಬಗ್ಗೆ ಹೆಚ್ಚಿನ ಯತ್ನ ಮಾಡಬೇಕು. ಈ ಯುದ್ಧದಿಂದ ವಿಶ್ವದ ಆರ್ಥಿಕತೆ ಮೇಲೆ ತೀವ್ರ ಪ್ರಭಾವ ಬೀರಲಿದೆಚೀನಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.