ADVERTISEMENT

ಇರಾನ್‌: ಉತ್ತರಾಧಿಕಾರಿ ಸ್ಪರ್ಧೆಯಲ್ಲಿ ಯಾರ‍್ಯಾರು?

ಏಜೆನ್ಸೀಸ್
Published 2 ಮಾರ್ಚ್ 2026, 23:00 IST
Last Updated 2 ಮಾರ್ಚ್ 2026, 23:00 IST
ಅಯತೊಲ್ಲಾ ಖಮೇನಿ
ಅಯತೊಲ್ಲಾ ಖಮೇನಿ   

ಟೆಹರಾನ್‌: 37 ವರ್ಷ ದೇಶವನ್ನು ಆಳಿದ್ದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಬಳಿಕ ಅವರ ಉತ್ತರಾಧಿಕಾರಿಯ ಆಯ್ಕೆಗಾಗಿ ಹುಡುಕಾಟ ಆರಂಭವಾಗಿದೆ.

ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌, ನ್ಯಾಯಾಂಗ ಇಲಾಖೆಯ ಮುಖ್ಯಸ್ಥ ಗೊಲಮ್‌ ಹೊಸೈನ್ ಮೊಹ್‌ಸೆನಿ ಎಜೆಹೈ ಹಾಗೂ ಅಯತೊಲ್ಲಾ ಅಲಿ ರೆಜಾ ಅರಾಫಿ ಅವರನ್ನು ಒಳಗೊಂಡ ಮಂಡಳಿಯು ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶವನ್ನು ಮುನ್ನಡೆಸುತ್ತಿದೆ. 

ಈ ಮಧ್ಯೆ ‘ಇರಾನ್‌ನ ಪರಮೋಚ್ಚ ನಾಯಕನನ್ನು ಈ ವಾರ ಆಯ್ಕೆ ಮಾಡಲಾಗುವುದು’ ಎಂದು ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ತಿಳಿಸಿದ್ದಾರೆ. 88 ಸದಸ್ಯರನ್ನು ಒಳಗೊಂಡ ತಜ್ಞರ ಸಮಿತಿಯು ಪರಮೋಚ್ಚ ನಾಯಕನನ್ನು ಆಯ್ಕೆ ಮಾಡಲಿದೆ.

ADVERTISEMENT

ಸ್ಪರ್ಧೆಯಲ್ಲಿರುವ ಪ್ರಮುಖರು

ಮೊಜತಬಾ ಖಮೇನಿ: ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ. ಇವರೇ ಸಮರ್ಥವಾದ ಉತ್ತರಾಧಿಕಾರಿ ಎಂಬ ಅಭಿಪ್ರಾಯವಿದೆ. ಆದರೆ ಇಸ್ಲಾಮಿಕ್‌ ರಿಪಬ್ಲಿಕ್‌ ಮೊದಲಿನಿಂದಲೂ ವಂಶಾಡಳಿತಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ.

ಅಯತೊಲ್ಲಾ ಅಲಿ ರೆಜಾ ಅರಾಫಿ: ಹಂಗಾಮಿ ಮಂಡಳಿಯ ಸದಸ್ಯರಲ್ಲಿ ಒಬ್ಬರು. 2019ರಲ್ಲಿ ಖಮೇನಿ ಅವರು ಗಾರ್ಡಿಯನ್‌ ಮಂಡಳಿಯ ಸದಸ್ಯರಾಗಿ ಇವರನ್ನು ಆಯ್ಕೆ ಮಾಡಿದ್ದರು. ಬಳಿಕ ತಜ್ಞರ ಸಮಿತಿಗೂ ಚುನಾಯಿತರಾಗಿದ್ದರು.

ಹಸನ್ ರೌಹಾನಿ: 2013–21ರವರೆಗೆ ಇರಾನ್‌ನ ಅಧ್ಯಕ್ಷರಾಗಿದ್ದರು. ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರೊಂದಿಗೆ ಪರಮಾಣು ಒಪ್ಪಂದ ಮಾಡಿಕೊಂಡಿದ್ದರು. ನಂತರ ಅಧಿಕಾರಕ್ಕೆ ಬಂದ ಟ್ರಂಪ್ ಅವರು ಒಪ್ಪಂದವನ್ನು ರದ್ದುಮಾಡಿದರು.

ಹಸನ್‌ ಖಮೇನಿ: ಇಸ್ಲಾಮಿಕ್‌ ರಿಪಬ್ಲಿಕ್ ಸಂಸ್ಥಾಪಕ ಆಯತೊಲ್ಲಾ ರುಹೊಲ್ಲಾಹ್‌ ಖೊಮೇನಿ ಅವರ ಮೊಮ್ಮಗ.

ಆಯತೊಲ್ಲಾ ಮೊಹಮ್ಮದ್ ಮೆಹ್ದಿ ಮೀರ್‌ಬಘೇರಿ: ಹಿರಿಯ ಧಾರ್ಮಿಕ ನಾಯಕ ಮತ್ತು ತಜ್ಞರ ಸಮಿತಿಯ ಸದಸ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.