ADVERTISEMENT

ಮೊಜತಬಾ ಖಮೇನಿ ಪರಿಚಯ: ಅಪ್ಪನ ಉತ್ತರಾಧಿಕಾರಿಯಾಗಿ ಮಗನ ಎಂಟ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2026, 6:20 IST
Last Updated 4 ಮಾರ್ಚ್ 2026, 6:20 IST
   

ಟೆಹರಾನ್: ಇರಾನ್ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಬಳಿಕ ಆ ಸ್ಥಾನಕ್ಕೆ ಅವರ ‍ಮಗ ಮೊಜತಬಾ ಖಮೇನಿ ಅವರನ್ನು ನೇಮಿಸಲು ಬಹುತೇಕ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಉತ್ತರಾಧಿಕಾರಿಯ ಬಗ್ಗೆ ಚರ್ಚಿಸಲು ಮಂಗಳವಾರ ಧರ್ಮಗುರುಗಳ ಸಮಿತಿಯಾದ 'ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್' ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂವರು ಅಧಿಕಾರಿಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ.

ಅಂತಿಮ ಘೋಷಣೆಯಾಗದಿದ್ದರೂ ಮೊಜತಬಾ ಅವರು ಉತ್ತರಾಧಿಕಾರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬುದು ಖಚಿತವಾಗಿದೆ. ಆದರೆ, ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ, ಮೊಜತಬಾ ಅವರ ಹೆಸರನ್ನು ಘೋಷಿಸುವುದರಿಂದ ಶತ್ರುಗಳು ಅವರ ಮೇಲೆ ದಾಳಿ ನಡೆಸಬಹುದು ಎಂಬ ಆತಂಕ ವ್ಯಕ್ತವಾಗಿದೆ.

ADVERTISEMENT

ಫೆ.28ರಂದು ಅಮೆರಿಕ–ಇಸ್ರೇಲ್‌ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಹತ್ಯೆಯಾಗಿದ್ದರು. ಅವರ ಹತ್ಯೆಗೆ ಇರಾನ್‌ನಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಮೊಜತಬಾ ಖಮೇನಿ ಪರಿಚಯ

ಮೊಜತಬಾ ಖಮೇನಿ ಅವರು 1969ರಲ್ಲಿ ಮಶಾದ್‌ನಲ್ಲಿ ಜನಿಸಿದರು. ಈ ವೇಳೆ ಇರಾನ್‌ನಲ್ಲಿ ಶಾ ಆಡಳಿತವಿತ್ತು. ಇದರ ವಿರುದ್ಧ ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಅವರು ಹೋರಾಡಿದ್ದರು.

ಇರಾನ್‌ನ ಧಾರ್ಮಿಕ ವ್ಯವಸ್ಥೆಯಲ್ಲಿನ ಇತರ ಹಿರಿಯ ನಾಯಕರಿಗೆ ಹೋಲಿಸಿದರೆ, ಮೊಜತಬಾ ಅವರು ಉನ್ನತ ಮಟ್ಟದ ಧಾರ್ಮಿಕ ವಿದ್ವಾಂಸರಾಗಿ ಗುರುತಿಸಿಕೊಂಡಿಲ್ಲ. ಅವರು ಇದುವರೆಗೆ ಯಾವುದೇ ಚುನಾಯಿತ ಹುದ್ದೆಯನ್ನು ಅಲಂಕರಿಸಿಲ್ಲ ಅಥವಾ ಯಾವುದೇ ಅಧಿಕೃತ ಸರ್ಕಾರಿ ಜವಾಬ್ದಾರಿಯನ್ನು ಹೊಂದಿಲ್ಲ. ಆದಾಗ್ಯೂ, ತೆರೆಮರೆಯಲ್ಲಿ ಅವರು ಹೆಚ್ಚಿನ ಪ್ರಭಾವ ಹೊಂದಿದ್ದಾರೆ ಎನ್ನಲಾಗಿದೆ.

ವಿಶೇಷವಾಗಿ ಇರಾನ್‌ನ ಶಕ್ತಿಯುತ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (ಐಆರ್‌ಜಿಸಿ) ನೊಂದಿಗೆ ಅವರು ನಿಕಟ ಸಂಬಂಧ ಹೊಂದಿದ್ದಾರೆ. ಇರಾನ್-ಇರಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಅವರು, ನಂತರ ತಮ್ಮ ತಂದೆಯ ಕಚೇರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ಯಾವುದೇ ಅಧಿಕೃತ ಹುದ್ದೆ ಹೊಂದಿಲ್ಲದಿದ್ದರೂ, ಪರಮೋಚ್ಛ ನಾಯಕನ ಪರವಾಗಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪದ ಮೇಲೆ 2019 ರಲ್ಲಿ ಅಮೆರಿಕ ಅವರ ಮೇಲೆ ನಿರ್ಬಂಧವನ್ನೂ ಹೇರಿತ್ತು.

ಮೊಜತಬಾ ಆಯ್ಕೆಗೆ ಕಾರಣವೇನು?

ಇಸ್ಲಾಮಿಕ್ ಗಣರಾಜ್ಯದ ವ್ಯವಸ್ಥೆಯಲ್ಲಿ ವಂಶಪಾರಂಪರ್ಯದ ಆಡಳಿತಕ್ಕೆ ವಿರೋಧವಿದೆ. ತಂದೆಯ ನಂತರ ಮಗ ಅಧಿಕಾರಕ್ಕೆ ಬರುವುದನ್ನು ಶಿಯಾ ಧರ್ಮಗುರುಗಳ ಸಮಿತಿ ಒಪ್ಪುವುದಿಲ್ಲ. ಹೀಗಾಗಿ ಮೊಜತಬಾ ಅವರ ಆಯ್ಕೆಯು ಐತಿಹಾಸಿಕ ಎನಿಸಿಕೊಳ್ಳಲಿದೆ.

‘ಪರಮೋಚ್ಛ ನಾಯಕನ ಸ್ಥಾನಕ್ಕೆ ಮೊಜತಬಾ ಅವರನ್ನು ಆಯ್ಕೆ ಮಾಡುವುದು ಇರಾನ್‌ ಆಡಳಿತದಲ್ಲಿ ಐಆರ್‌ಜಿಸಿ ಹಿಡಿತ ಹೆಚ್ಚಿರುವುದನ್ನು ಸೂಚಿಸುತ್ತದೆ’ ಎನ್ನುತ್ತಾರೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಪಕ ಅಲಿ ನಾಸರ್.

‘ಬಿಕ್ಕಟ್ಟಿನ ಸಂದರ್ಭದಲ್ಲಿ ತಂದೆಯ ಆಳ್ವಿಕೆಯ ಮುಂದುವರಿಕೆ ಎಂದು ಮೊಜತಬಾ ಬೆಂಬಲಿಗರು ನೋಡಬಹುದು. ಆದರೆ, ರಾಜಕೀಯ ವಿಶ್ಲೇಷಕರ ಪ್ರಕಾರ, ಇದು ವಂಶಾಡಳಿತವನ್ನು ವಿರೋಧಿಸುವ ವ್ಯವಸ್ಥೆಯೊಳಗೆ ವ್ಯವಸ್ಥಿತವಾಗಿ ಸ್ಥಾನ ಭದ್ರಪಡಿಸಿಕೊಳ್ಳುವ ತಂತ್ರವಾಗಿದೆ’ ಎಂದು ಅವರು ಹೇಳಿದ್ದಾರೆ.

ಸಂವಿಧಾನಾತ್ಮಕವಾಗಿ ಪರಮೋಚ್ಛ ನಾಯಕನನ್ನು ನೇಮಿಸುವ ಅಧಿಕಾರವನ್ನು 88 ಸದಸ್ಯರನ್ನೊಳಗೊಂಡ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಹೊಂದಿದೆ. ಇರಾನ್‌ ಇತಿಹಾಸದಲ್ಲಿ ಈ ಮಂಡಳಿಯು ಹೊಸ ನಾಯಕನನ್ನು ಆಯ್ಕೆ ಮಾಡುತ್ತಿರುವುದು ಇದು ಕೇವಲ ಎರಡನೇ ಬಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.