ಖಾನ್ ಯೂನಿಸ್ ಮೇಲೆ ಇಸ್ರೇಲ್ ನಡೆಸಿದ ದಾಳಿ
ರಾಯಿಟರ್ಸ್ ಚಿತ್ರ
ಡೀರ್ ಅಲ್-ಬಲಾಹ್: ಇಸ್ರೇಲ್ ಸೇನೆ ಗಾಜಾಪಟ್ಟಿ ಮೇಲೆ ಶನಿವಾರ ರಾತ್ರಿಯಿಡೀ ನಡೆಸಿದ ದಾಳಿಯಲ್ಲಿ ಹಮಾಸ್ ಸಂಘಟನೆಯ ರಾಜಕೀಯ ನಾಯಕ ಸೇರಿದಂತೆ 19 ಮಂದಿ ಮೃತಪಟ್ಟಿರುವುದಾಗಿ ಭಾನುವಾರ ವರದಿಯಾಗಿದೆ.
ತಮ್ಮ ರಾಜಕೀಯ ಘಟಕ ಹಾಗೂ ಪ್ಯಾಲೆಸ್ಟೀನ್ ಸಂಸತ್ತಿನ ಸದಸ್ಯ ಸಲಾಹ್ ಬರ್ದಾವಿಲ್ ಅವರು ದಕ್ಷಿಣ ನಗರ ಖಾನ್ ಯೂನಿಸ್ ಸಮೀಪ ಮೃತಪಟ್ಟಿದ್ದಾನೆ. ಅವರ ಪತ್ನಿಯೂ ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಖಚಿತಪಡಿಸಿದೆ. ಹಮಾಸ್‌ನ ರಾಜಕೀಯ ಗುಂಪಿನ ಜನಪ್ರಿಯ ನಾಯಕನಾಗಿದ್ದ ಬರ್ದಾವಿಲ್, ಹಲವು ವರ್ಷಗಳಿಂದ ಸಂಘಟನೆ ಪರ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದರು.
ಏತನ್ಮಧ್ಯೆ, ಹಮಾಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಹಾಗೂ ಯೆಮೆನ್‌ನಲ್ಲಿರುವ ಇರಾನ್ ಬೆಂಬಲಿತ ಬಂಡುಕೋರರು ಇಸ್ರೇಲ್ ಮೇಲೆ ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ ಎಂದಿರುವ ಇಸ್ರೇಲ್ ಸೇನೆ, ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿಸಿದೆ.
ಹಮಾಸ್ ಜೊತೆಗಿನ ಕದನವಿರಾಮವನ್ನು ಕೊನೆಗೊಳಿಸಿದ್ದ ಇಸ್ರೇಲ್, ಕಳೆದವಾರ ಏಕಾಏಕಿ ನಡೆಸಿದ ದಾಳಿಯಲ್ಲಿ ನೂರಾರು ಪ್ಯಾಲೆಸ್ಟೀನಿಯರು ಹತ್ಯೆಯಾಗಿದ್ದಾರೆ. ಇದರ ಬೆನ್ನಲ್ಲೇ, ಇಸ್ರೇಲ್ ಮೇಲೆ ದಾಳಿ ಆರಂಭಿಸಿದ್ದ ಯೆಮೆನ್‌ನ ಹುಥಿ ಬಂಡುಕೋರರು, ಪ್ಯಾಲಿಸ್ಟೀನ್ ಜೊತೆಗಿನ ಒಗ್ಗಟ್ಟಿನ ಭಾಗವಾಗಿ ದಾಳಿ ನಡೆಸುತ್ತಿರುವುದಾಗಿ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.