ಅಮೆರಿಕದಲ್ಲಿ ಪ್ರತಿಭಟನೆ
– ರಾಯಿಟರ್ಸ್ ಚಿತ್ರ
ದುಬೈ/ದೋಹಾ/ ಬಿರ್ಶೇಬಾ : ‘ಇಸ್ರೇಲ್ ಮತ್ತು ಇರಾನ್ ಪೂರ್ಣ ಪ್ರಮಾಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಮುಂಜಾನೆ (ಭಾರತೀಯ ಕಾಲಮಾನ) ಹೇಳಿದ್ದಾರೆ.
‘ಕತಾರ್ ಸರ್ಕಾರವು ಅಮೆರಿಕದ ಮನವಿಯ ಮೇರೆಗೆ ಇರಾನ್‌ನೊಂದಿಗೆ ಮಾತುಕತೆ ನಡೆಸಿ ಕದನ ವಿರಾಮಕ್ಕೆ ಒಪ್ಪಿಸಿದೆ’ ಎಂದು ಮೂಲಗಳು ಹೇಳಿವೆ. ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ
ಮೇಲೆ ಸೋಮವಾರ ರಾತ್ರಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯ ಬಳಿಕ ಈ ಕ್ಷಿಪ್ರ ಬೆಳವಣಿಗೆ ನಡೆದಿದೆ.
‘ಸೇನಾ ನೆಲೆಗಳ ಮೇಲಿನ ದಾಳಿಯನ್ನು ಮುಂದಿಟ್ಟುಕೊಂಡೇ ಇಸ್ರೇಲ್ ಅನ್ನು ಕದನ ವಿರಾಮಕ್ಕೆ ಅಮೆರಿಕ ಒಪ್ಪಿಸಿತು’ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಇಡೀ ಪ್ರಕ್ರಿಯೆಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಪಾತ್ರವೇನು ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಈ ಬೆಳವಣಿಗೆಗಳ ಮಧ್ಯೆಯೂ, ಮಂಗಳವಾರ ಇಸ್ರೇಲ್ ಹಾಗೂ ಇರಾನ್ ಪರಸ್ಪರರ ಮೇಲೆ ತೀವ್ರ ಪ್ರಮಾಣದ ಕ್ಷಿಪಣಿ ದಾಳಿ ನಡೆಸಿವೆ. ಇಸ್ರೇಲ್ ದಾಳಿಯಲ್ಲಿ ಇರಾನ್‌ನ 9 ಮಂದಿ ಮೃತಪಟ್ಟರೆ, ಇರಾನ್
ದಾಳಿಯಲ್ಲಿ ಇಸ್ರೇಲ್‌ನ ನಾಲ್ವರು ಮೃತಪಟ್ಟಿದ್ದಾರೆ.
ಕದನ ವಿರಾಮಕ್ಕೆ ಒಪ್ಪಿದ್ದು ಯಾರು?
ತಾನು ಪೋಸ್ಟ್ ಮಾಡಿದ ಆರು ತಾಸಿನ ಒಳಗೆ ಎರಡೂ ದೇಶಗಳು ತಮ್ಮ ಅಪೂರ್ಣ ದಾಳಿಯನ್ನು ಪೂರ್ಣ ಮಾಡುತ್ತವೆ ಮತ್ತು ಅಂತಿಮ ದಾಳಿ ನಡೆಸುತ್ತವೆ. ಮುಂದಿನ 12 ತಾಸಿನಲ್ಲಿ ಎಲ್ಲಾ ದಾಳಿಗಳು ಕೊನೆಗೊಳ್ಳುತ್ತವೆ. ಮೊದಲಿಗೆ ಇರಾನ್ ಕದನಕ್ಕೆ ವಿರಾಮ ಘೋಷಿಸುತ್ತದೆ, ಅಲ್ಲಿಂದ 12 ತಾಸಿನ ಬಳಿಕ ಇಸ್ರೇಲ್ ಘೋಷಿಸುತ್ತದೆ ಎಂದು ಟ್ರಂಪ್ ಅವರು ಮಂಗಳವಾರ ಬೆಳಿಗ್ಗೆ 3.34ಕ್ಕೆ (ಭಾರತೀಯ ಕಾಲಮಾನ) ಜಾಲತಾಣಗಳಲ್ಲಿ ತಮ್ಮ ಮೊದಲ ಪೋಸ್ಟ್ ಹಂಚಿಕೊಂಡರು.
ಆದರೆ, ‘ಇಸ್ರೇಲ್ ಸೇನೆಯು ಬೆಳಿಗ್ಗೆ 9ರವರೆಗೆ ದಾಳಿ ನಡೆಸಿದೆ’ ಎಂದು ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.
ಈ ವೇಳೆ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅಬ್ಬಾಸ್ ಅರಾಗ್ಚಿ ಪ್ರತಿಕ್ರಿಯಿಸಿ, ‘ಈ ಹೊತ್ತಿನವರೆಗೆ ಯಾವ ಒಪ್ಪಂದವೂ ಏರ್ಪಟ್ಟಿಲ್ಲ. ಯಾವ ಕದನ ವಿರಾಮವೂ ಇಲ್ಲ, ಸೇನಾ ಕಾರ್ಯಾಚರಣೆ ರದ್ದತಿಯೂ ಇಲ್ಲ. ಒಂದು ವೇಳೆ ಇಸ್ರೇಲ್ ಸರ್ಕಾರ ಬೆಳಿಗ್ಗೆ 6 ಗಂಟೆಯ (ಭಾರತೀಯ ಕಾಲಮಾನ) ಒಳಗೆ ನಮ್ಮ ಮೇಲಿನ ದಾಳಿಯನ್ನು ನಿಲ್ಲಿಸಿದರೆ, ಯುದ್ಧವನ್ನು ಮುಂದುವರಿಸುವ ಯಾವ ಉದ್ದೇಶವೂ ನಮಗಿಲ್ಲ’ ಎಂದರು. ಆದರೆ, ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದರು.
ಇಸ್ರೇಲ್ ಹೇಳಿದ್ದು
ನಮ್ಮ ‘ರೈಸಿಂಗ್ ಲಯನ್’ ಕಾರ್ಯಾಚರಣೆಯು ಸಂಪೂರ್ಣವಾಗಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯ ಉದ್ದೇಶಗಳು ಪೂರ್ಣಗೊಂಡಿವೆ. ‘ಅಣ್ವಸ್ತ್ರ ಮತ್ತು ಕ್ಷಿಪಣಿ’ ಎಂಬ ಎರಡು ಬೆದರಿಕೆಗಳನ್ನು ನಾವು ಇಲ್ಲವಾಗಿಸಿದ್ದೇವೆ. ಯಾವುದೇ ರೀತಿಯ ಕದನ ವಿರಾಮ ಉಲ್ಲಂಘನೆಗೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಕದನ ವಿರಾಮ ಘೋಷಣೆಯಾಗಿದ್ದರೂ ಅಪಾಯ ಇದ್ದೇ ಇದೆ
ಇರಾನ್ ಹೇಳಿದ್ದು
ಹೊಸ ಯುಗವೊಂದು ಆರಂಭ ಗೊಂಡಿದೆ. ಐತಿಹಾಸಿಕ ಜಯ ಇದು. ಅಮೆರಿಕ ಮತ್ತು ಪಶ್ಚಿಮದ ದೇಶಗಳ ಕೊಂಬನ್ನು ಇರಾನ್ ಮುರಿದಿದೆ. ಅವರಾಗಿಯೇ ಕದನ ವಿರಾಮ ಘೋಷಿಸು ವಂತೆ ಇರಾನ್ ಮಾಡಿತು. ಈ ಜಯವು ನಮಗೆ ದೇವರ ಉಡುಗೊರೆ. ಶತ್ರುವು ತನ್ನ ದಾಳಿಯನ್ನು ತಾನಾಗಿಯೇ ನಿಲ್ಲಿಸು ವಂತೆ ಮಾಡಿದ ಗೆಲುವಿದು
ಕತಾರ್ ಮುಖ್ಯಭೂಮಿಕೆ
‘ಅಮೆರಿಕದ ಕದನ ವಿರಾಮ ಪ್ರಸ್ತಾವಕ್ಕೆ ಇಸ್ರೇಲ್ ಒಪ್ಪಿಕೊಂಡಿದೆ ಎಂದು ಡೊನಾಲ್ಡ್ ಟ್ರಂಪ್ ಅವರು ಕತಾರ್‌ನ ರಾಜ ಶೇಕ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ ತಿಳಿಸಿದರು. ಇರಾನ್ ಅನ್ನೂ ಕದನ ವಿರಾಮಕ್ಕೆ ಒಪ್ಪಿಸುವಂತೆ ಟ್ರಂಪ್ ಅವರು ರಾಜನನ್ನು ಕೇಳಿಕೊಂಡರು. ಬಳಿಕ, ಕತಾರ್ ಪ್ರಧಾನಿ ಶೇಕ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ ಥಾನಿ ಅವರು ಕದನ ವಿರಾಮ ಪ್ರಸ್ತಾವಕ್ಕೆ ಒಪ್ಪಿಕೊಳ್ಳುವಂತೆ ಇರಾನ್ ಮೇಲೆ ಒತ್ತಡ ಹೇರಿದರು’ ಎಂದು ಮೂವರು ರಾಜತಾಂತ್ರಿಕರು ಮಾಹಿತಿ ನೀಡಿದ್ದಾರೆ.
‘ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ಖುದ್ದು ಟ್ರಂಪ್ ಅವರೇ ಮಾತುಕತೆ ನಡೆಸಿ, ಕದನ ವಿರಾಮಕ್ಕೆ ಒಪ್ಪಿಸಿದ್ದಾರೆ. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಇರಾನ್‌ನ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇಸ್ರೇಲ್ ಮೇಲೆ ಟ್ರಂಪ್ ಕೋಪ
ಕದನ ವಿರಾಮಕ್ಕೆ ನೀಡಿದ ಗಡುವು ಮುಗಿದ ಬಳಿಕವೂ ಇಸ್ರೇಲ್ ಹಾಗೂ ಇರಾನ್ ಪರಸ್ಪರ ದಾಳಿ ನಡೆಸಿಕೊಂಡಿವೆ ಎಂದು ಡೊನಾಲ್ಡ್ ಟ್ರಂಪ್ ಅವರು ಗುಡುಗಿದ್ದಾರೆ.
‘ಅವರೂ (ಇರಾನ್) ಕದನ ವಿರಾಮ ಉಲ್ಲಂಘಿಸಿದರು. ಇಸ್ರೇಲ್ ಕೂಡ ಉಲ್ಲಂಘಿಸಿತು. ಇಸ್ರೇಲ್ ನಡೆಯ ಬಗ್ಗೆ ನನಗೆ ತೃಪ್ತಿ ಇಲ್ಲ. ನಾವು ಒಪ್ಪಂದ ಮಾಡಿಕೊಂಡ ಬಳಿಕ ಇಸ್ರೇಲ್ ಅದಕ್ಕೆ ಅನುಗುಣವಾಗಿ ನಡೆದುಕೊಂಡಿಲ್ಲ’ ಎಂದು ಟ್ರಂಪ್ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.
ಕೆಲವು ಹೊತ್ತು ಬಳಿಕ, ‘ಇಸ್ರೇಲ್, ಬಾಂಬ್‌ಗಳನ್ನು ಬೀಳಿಸಬೇಡಿ. ನೀವು ಹಾಗೆ ಮಾಡಿದರೆ, ಅದು ಕದನ ವಿರಾಮದ ಗಂಭೀರ ಉಲ್ಲಂಘನೆಯಾಗುತ್ತದೆ. ನಿಮ್ಮ ಪೈಲಟ್‌ಗಳನ್ನು ಈಗಲೇ ಮನೆಗೆ ವಾಪಸು ಕರೆಸಿಕೊಳ್ಳಿ’ ಎಂದು ಪೋಸ್ಟ್ ಹಂಚಿಕೊಂಡರು.
ನಿಜವಾಗಿ ನಮಗೆ ಸುಸ್ತಾಗಿ ಹೋಗಿದೆ. ನಾವೆಲ್ಲರೂ ದಣಿದಿದ್ದೇವೆ. ನಮಗೆ ಮನಶ್ಶಾಂತಿ ಬೇಕು. ನಮಗೆ, ಇರಾನ್‌ನ ಜನರಿಗೆ, ಪ್ಯಾಲೆಸ್ಟೀನಿಯನ್ನರಿಗೆ ಈ ಪ್ರದೇಶದ ಎಲ್ಲರಿಗೂ. ಎಲ್ಲಾ ಮಾನವ ಕುಲಕ್ಕೂ. ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆಟಮ್ಮೀ ಶೆಲ್, ಟೆಲ್ ಅವೀವ್ ನಿವಾಸಿ
ಸಾಕು! ಇಡೀ ವಿಶ್ವವೇ ನಮ್ಮನ್ನು ಸೋಲಿಸಿದೆ. ನಮ್ಮನ್ನು ಬಿಟ್ಟು ಹಿಜ್ಬುಲ್ಲಾ ಕೂಡ ಕದನ ವಿರಾಮ ಘೋಷಿಸಿಕೊಂಡಿತು, ಈಗ ಇರಾನ್ ಕೂಡ ಹೀಗೆಯೇ ಮಾಡಿತು. ಬಹುಶಃ ಮುಂದಿನ ಬಾರಿ ಗಾಜಾದಲ್ಲಿಯೂ ಕದನ ವಿರಾಮ ಘೋಷಣೆಯಾಗಬಹುದುಆದಿಲ್ ಫಾರೂಕ್, ಗಾಜಾ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.