ADVERTISEMENT

ಇಸ್ರೇಲ್ ಶೋಧ | 25 ಮೀ. ಆಳದಲ್ಲಿ ಹಮಾಸ್‌ ನೆಲಮಾಳಿಗೆ; 7 Km ಉದ್ದ, 80 ಕೋಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2025, 6:50 IST
Last Updated 21 ನವೆಂಬರ್ 2025, 6:50 IST
<div class="paragraphs"><p>ಇಸ್ರೇಲ್ ಪತ್ತೆ ಮಾಡಿದ ಹಮಾಸ್‌ನ ನೆಲದಡಿಯ ಸಂಕೀರ್ಣ</p></div>

ಇಸ್ರೇಲ್ ಪತ್ತೆ ಮಾಡಿದ ಹಮಾಸ್‌ನ ನೆಲದಡಿಯ ಸಂಕೀರ್ಣ

   

ಎಕ್ಸ್ ಚಿತ್ರ

ನವದೆಹಲಿ: ಗಾಜಾ ಪಟ್ಟಿಯಲ್ಲಿ ಹಮಾಸ್‌ ಕೊರೆದಿದ್ದ ಬೃಹತ್ ಸುರಂಗವನ್ನು ಇಸ್ರೇಲ್‌ ಸೇನೆ ಪತ್ತೆ ಮಾಡಿದೆ. ಇದರ ಆಳ, ಅಗಲ ಹಾಗೂ ಅಲ್ಲಿರುವ ಸೌಕರ್ಯಗಳು ಅಚ್ಚರಿ ಮೂಡಿಸುವಂತಿವೆ.

ADVERTISEMENT

2014ರಲ್ಲಿ ಇಸ್ರೇಲ್‌ ಹಾಗೂ ಹಮಾಸ್ ನಡುವೆ ನಡೆದ ಯುದ್ಧದಲ್ಲಿ ಇಸ್ರೇಲ್‌ನ ಲೆಫ್ಟಿನೆಂಟ್ ಹದರ್ ಗೋಲ್ಡಿನ್‌ ಅವರು ಮೃತಪಟ್ಟಿದ್ದರು. ಅವರ ಕಳೇಬರಹವನ್ನು ಇತ್ತೀಚೆಗೆ ಇಸ್ರೇಲ್‌ ಪಡೆದುಕೊಂಡಿದೆ. ಗೋಲ್ಡಿನ್ ಅವರ ಕಳೇಬರಹಕ್ಕಾಗಿ ಹುಡುಕಾಟ ನಡೆಸಿದ ಇಸ್ರೇಲ್ ಸೇನೆಯು ಹಮಾಸ್‌ನ ಬೃಹತ್‌ ಸುರಂಗ ಸಂಕೀರ್ಣವನ್ನೇ ಪತ್ತೆ ಮಾಡಿದೆ. ಇದನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೊ ಸಹಿತ ಹಂಚಿಕೊಂಡಿದೆ.

ಅತ್ಯಂತ ಜನಸಂದಣಿ ಇರುವ ರಫಾ ಬಳಿ ನಿರ್ಮಿಸಲಾಗಿದೆ. ಇದರೊಳಗೆ ಮಸೀದಿ ಇದೆ. ಕ್ಲಿನಿಕ್‌ ಹಾಗೂ ಮಕ್ಕಳಿಗೆ ಶಾಲೆಯೂ ಇದೆ. ಇದನ್ನು ಶಸ್ತ್ರಾಸ್ತ್ರಗಳ ದಾಸ್ತಾನಿಗೆ, ದಾಳಿಯ ಯೋಜನೆಗೆ ಮತ್ತು ದೀರ್ಘಕಾಲ ಅಡಗಿಕೊಳ್ಳಲು ಬಳಸಲಾಗುತ್ತಿತ್ತು ಎಂದು ಇಸ್ರೇಲ್‌ ಸೇನೆ ಹೇಳಿದೆ.

ಈ ಸುರಂಗ ಸಂಕೀರ್ಣವು ಏಳು ಕಿಲೋ ಮೀಟರ್ ಉದ್ದವಿದೆ. 25 ಅಡಿ ಆಳದಲ್ಲಿ ನಿರ್ಮಿಸಲಾಗಿದೆ. ಒಟ್ಟು 80 ಕೊಠಡಿಗಳು ಇಲ್ಲಿವೆ. ಈ ಸುರಂಗ ಸಂಕೀರ್ಣವನ್ನು ಯುದ್ಧ ಎಂಜಿನಿಯರಿಂಗ್ ವಿಭಾಗದ ಯಾಹಲೊಮ್‌ ಮತ್ತು 13 ನೌಕಾದಳದ ಕಮಾಂಡೊ ವಿಭಾಗದ ಶಯೆತತ್‌ ಶೋಧಿಸಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಸುರಂಗ ಸಂಕೀರ್ಣವನ್ನು ಹಮಾಸ್‌ನ ಹಿರಿಯ ಕಮಾಂಡರ್ ಮುಹಮ್ಮದ್ ಶಬಾಬಾ ಬಳಸುತ್ತಿದ್ದರು. ಮೊಹಮ್ಮದ್ ಸಿನ್ವಾರ್‌ ಜತೆ ಇವರೂ ಕಳೆದ ಮೇನಲ್ಲಿ ಹತರಾದರು.

ಲೆಫ್ಟಿನೆಂಟ್ ಗೋಲ್ಡಿನ್‌ ಅವರ ಸಾವಿಗೆ ಕಾರಣನಾದ ಮರ್ವಾನ್ ಅಲ್‌ ಹಮಾಸ್‌ನನ್ನು ಇಸ್ರೇಲ್ ಸೇನೆ ಬಂಧಿಸಲಾಗಿದೆ ಎಂದು ಎಕ್ಸ್‌ನಲ್ಲಿ ಹೇಳಲಾಗಿದೆ. 2023ರ ಅ. 7ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿ ನಾಗರಿಕರ ಸಹಿತ 1,200 ಜನರನ್ನು ಹತ್ಯೆ ಮಾಡಿತ್ತು. 251 ಜನರನ್ನು ಒತ್ತೆಯಾಗಿರಿಸಿಕೊಂಡಿತ್ತು. 

2023ರ ಅಕ್ಟೋಬರ್‌ನಲ್ಲಿ ಆರಂಭವಾಗಿರುವ ಗಾಜಾ ಯುದ್ಧದಲ್ಲಿ ಇಸ್ರೇಲ್ ಪಡೆಯು ಗಾಜದ ದಕ್ಷಿಣ ಭಾಗದ ಮೇಲೆ ಗುರುವಾರ ವಾಯು ದಾಳಿ ನಡೆಸಿದೆ. ಇದರಲ್ಲಿ ಐವರು ಮೃತಪಟ್ಟು, 18 ಜನ ಗಾಯಗೊಂಡಿದ್ದಾರೆ. 

ಆರು ವಾರಗಳ ಇದ್ದ ಕದನ ವಿರಾಮವನ್ನು ಉಲ್ಲಂಘಿಸಲಾಗಿದೆ ಎಂದು ಹಮಾಸ್ ಮತ್ತು ಇಸ್ರೇಲ್ ಪರಸ್ಪರ ದೂಷಿಸಿಕೊಂಡಿವೆ.

ಹಮಾಸ್‌ ಮೇಲೆ ಪ್ರತಿಕಾರ ತೀರಿಸಿಕೊಂಡ ಇಸ್ರೇಲ್‌ ಪ್ಯಾಲೆಸ್ಟೀನ್‌ನ 69 ಸಾವಿರ ಜನರನ್ನು ಹತ್ಯೆ ಮಾಡಿದೆ. ಇದರಲ್ಲಿ ಬಹುತೇಕರು ನಾಗರಿಕರು ಎಂದು ಗಾಜಾದಲ್ಲಿರುವ ಆರೋಗ್ಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.