ADVERTISEMENT

ಗಾಜಾ ಮೇಲೆ ಇಸ್ರೇಲ್‌ನಿಂದ ಆಕ್ರಮಣದ ಬೆದರಿಕೆ

ಏಜೆನ್ಸೀಸ್
Published 14 ಮೇ 2021, 8:14 IST
Last Updated 14 ಮೇ 2021, 8:14 IST
ಇಸ್ರೇಲಿ ವಾಯು ಮತ್ತು ಫಿರಂಗಿ ದಾಳಿಯಿಂದಾಗಿ ಉತ್ತರ ಗಾಜಾ ಪ್ರದೇಶದಲ್ಲಿನ ಪ್ಯಾಲೆಸ್ಟೀನಿಯನ್ನರು ತಮ್ಮ ಮನೆಗಳನ್ನು ತೊರೆದು ಶುಕ್ರವಾರ ಹೋಗುತ್ತಿರುವ ದೃಶ್ಯ– ರಾಯಿಟರ್ಸ್‌ ಚಿತ್ರ
ಇಸ್ರೇಲಿ ವಾಯು ಮತ್ತು ಫಿರಂಗಿ ದಾಳಿಯಿಂದಾಗಿ ಉತ್ತರ ಗಾಜಾ ಪ್ರದೇಶದಲ್ಲಿನ ಪ್ಯಾಲೆಸ್ಟೀನಿಯನ್ನರು ತಮ್ಮ ಮನೆಗಳನ್ನು ತೊರೆದು ಶುಕ್ರವಾರ ಹೋಗುತ್ತಿರುವ ದೃಶ್ಯ– ರಾಯಿಟರ್ಸ್‌ ಚಿತ್ರ   

ಜೆರುಸಲೇಂ: ಇಸ್ರೇಲ್ ಗಾಜಾ ಗಡಿಯುದ್ದಕ್ಕೂ ಗುರುವಾರದಿಂದ ತನ್ನ ಸೈನ್ಯವನ್ನು ಒಟ್ಟುಗೂಡಿಸುತ್ತಿದೆ. ಹಮಸ್‌ ಆಳ್ವಿಕೆಯ ಭೂಪ್ರದೇಶದ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಇರುವುದರಿಂದ 9 ಸಾವಿರ ಸೈನಿಕರನ್ನು ಸಜ್ಜಾಗಿರುವಂತೆ ಸೂಚಿಸಿದೆ. ಇದರಿಂದ ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ.

ಈಜಿಪ್ಟಿನ ಮಧ್ಯವರ್ತಿಗಳು ಕದನ ವಿರಾಮದ ಪ್ರಯತ್ನಗಳಿಗಾಗಿ ಇಸ್ರೇಲಿಗೆ ಧಾವಿಸಿದ್ದಾರೆ. ಆದರೆ ಇದರಲ್ಲಿ ಅಂತಹ ಪ್ರಗತಿ ಇದುವರೆಗೆ ಕಂಡಿಲ್ಲ.

ಇಸ್ರೇಲ್‌ನಲ್ಲಿ ನಾಲ್ಕನೇ ರಾತ್ರಿಯೂ ಯಹೂದಿ ಮತ್ತು ಅರಬ್‌ ಜನ ಸಮೂಹಗಳ ನಡುವೆ ಘರ್ಷಣೆ ನಡೆದಿದ್ದು, ಕೋಮು ಹಿಂಸಾಚಾರ ಮುಂದುವರಿದಿದೆ. ಪೊಲೀಸರ ಎದುರೇ ಈ ಘರ್ಷಣೆಗಳು ನಡೆಯುತ್ತಿವೆ.

ADVERTISEMENT

ಗಡಿಪಾರು ಮಾಡಿದ ಹಿರಿಯ ಹಮಸ್ ನಾಯಕ ಸಲೇಹ್ ಅರುರಿ ಶುಕ್ರವಾರ ಮುಂಜಾನೆ ಲಂಡನ್ ಮೂಲದ ಉಪಗ್ರಹ ಚಾನೆಲ್ ಅಲ್ ಅರಾಬಿಗೆ ಪ್ರತಿಕ್ರಿಯೆ ನೀಡಿದ್ದು, ಪೂರ್ಣ ಕದನ ವಿರಾಮಕ್ಕೆ ಹೆಚ್ಚಿನ ಮಾತುಕತೆ ನಡೆಸಲು ಮೂರು ಗಂಟೆಗಳ ವಿರಾಮದ ಪ್ರಸ್ತಾವವನ್ನು ಅವರ ಗುಂಪು ತಿರಸ್ಕರಿಸಿದ್ದಾಗಿ ಹೇಳಿದ್ದಾರೆ. ಅಲ್ಲದೆ ಒಪ್ಪಂದದ ಪ್ರಯತ್ನಗಳಿಗೆ ಈಜಿಪ್ಟ್, ಕತಾರ್ ಮತ್ತು ವಿಶ್ವಸಂಸ್ಥೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಇಸ್ರೇಲಿ ವಾಯು ಮತ್ತು ಭೂ ಸೇನೆಯು ಗಾಜಾ ಪ್ರದೇಶದ ಮೇಲೆ ಶುಕ್ರವಾರದ ಮುಂಜಾನೆ ಪ್ರಬಲವಾದ ದಾಳಿ ನಡೆಸಿವೆ. ಗಾಜಾ ನಗರದ ಹೊರವಲಯದಲ್ಲಿ ಸ್ಫೋಟಗಳು ಸಂಭವಿಸಿವೆ.

‘ಹಮಸ್‌ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೇತನ್ಯಾಹು ವಿಡಿಯೊ ಮೂಲಕ ಹೇಳಿಕೆ ನೀಡಿದ್ದಾರೆ. ಅಲ್ಲದೆ, ‘ನಾವು ಅದನ್ನು ಮಾಡುತ್ತಿದ್ದೇವೆ ಮತ್ತು ಭಾರೀ ಬಲದಿಂದ ಮುಂದುವರಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇಸ್ರೇಲ್‌ ಪ್ರಧಾನಿ ನೇತನ್ಯಾಹು ಅವರೊಂದಿಗೆ ಮಾತನಾಡಿ, ಸಂಯಮದಿಂದ ವರ್ತಿಸಲು ಸಲಹೆ ನೀಡಿದ್ದಾರೆ. ಆದರೆ ಪ್ಯಾಲೆಸ್ಟೀನ್‌ ಕಡೆಯಿಂದ ಇದಕ್ಕೆ ಪೂರಕ ವಾತಾವರಣ ಇಲ್ಲ ಎಂಬುದನ್ನು ಖಚಿತಪಡಿಸುತ್ತಲೇ ನೆತನ್ಯಾಹು ಅವರ ಕ್ರಮಗಳನ್ನು ಸಮರ್ಥಿಸಿದ್ದಾರೆ.

ಈಜಿಪ್ಟ್ ಅಧಿಕಾರಿಗಳು ಎರಡೂ ಕಡೆಯವರನ್ನು ಭೇಟಿಯಾಗಿ ಕದನ ವಿರಾಮದ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಈಜಿಪ್ಟ್‌ ಆಗಾಗ್ಗೆ ಇಸ್ರೇಲ್‌ ಮತ್ತು ಹಮಸ್‌ ನಡುವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿ, ಯಶಸ್ವಿಯಾಗಿದೆ. ಮೊದಲಿಗೆ ಈ ಅಧಿಕಾರಿಗಳು ಹಮಸ್‌ ನಾಯಕರನ್ನು ಭೇಟಿ ಮಾಡಿ, ಬಳಿಕ ಇಸ್ರೇಲಿಗರೊಂದಿಗೆ ಮಾತುಕತೆ ನಡೆಸಿದರು ಎಂದು ಈಜಿಪ್ಟಿನ ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.

‘ಇಸ್ರೇಲ್‌ ಮಿಲಿಟರಿ ಪಡೆ ಭೂ ಆಕ್ರಮಣಕ್ಕೆ ಮುಂದಾದರೆ ಸಮರ್ಪಕವಾಗಿ ಎದುರಿಸುತ್ತೇವೆ. ಯಾವುದೇ ಆಕ್ರಮಣಕ್ಕೂ ನಾವು ಹೆದರುವುದಿಲ್ಲ. ಆಕ್ರಮಣ ಮಾಡುವ ಸೈನಿಕರನ್ನು ಸೆರೆ ಹಿಡಿಯುತ್ತೇವೆ ಇಲ್ಲವೇ ನಾಶ ಮಾಡುತ್ತೇವೆ’ ಎಂದು ಹಮಸ್‌ ಮಿಲಿಟರಿ ವಕ್ತಾರ ಅಬು ಒಬೀಡಾ ಹೇಳಿದ್ದಾರೆ.

109 ಸಾವು: ಇಸ್ರೇಲ್‌ ದಾಳಿಯಿಂದ 29 ಮಕ್ಕಳು, 15 ಮಹಿಳೆಯರ ಸಹಿತ 109 ಮಂದಿ ಪ್ಯಾಲೆಸ್ಟೀನ್‌ ನಾಗರಿಕರು ಮೃತಪಟ್ಟಿದ್ದಾಋಎ ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ. ತಮ್ಮ 20 ನಾಯಕರು ಮೃತಪಟ್ಟಿರುವುದನ್ನು ಹಮಸ್‌ ಮತ್ತು ಇಸ್ಲಾಮಿಕ್‌ ಜಿಹಾದ್ ಗುಂಪುಗಳು ಒಪ್ಪಿಕೊಂಡಿವೆ. ಹಮಸ್‌ ನಡೆಸಿದ ದಾಳಿಗಳಲ್ಲಿ ಇಸ್ರೇಲ್‌ನಲ್ಲಿ 6 ವರ್ಷದ ಬಾಲಕ ಸಹಿತ 7 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.