ADVERTISEMENT

ಗಾಜಾದಲ್ಲಿ ಶಾಂತಿ ಸ್ಥಾಪಿಸಲು ಅಮೆರಿಕದ ಮಧ್ಯಪ್ರವೇಶಕ್ಕೆ ಪ್ಯಾಲೆಸ್ಟೀನ್‌ ಒತ್ತಾಯ

ಏಜೆನ್ಸೀಸ್
Published 16 ಮೇ 2021, 7:38 IST
Last Updated 16 ಮೇ 2021, 7:38 IST
ಪಾಲೆಸ್ಟೈನ್ ಹಮಾಸ್ ಬಂಡುಕೋರ ನೆಲೆಯಾದ ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿ (ಎಎಫ್‌ಪಿ ಚಿತ್ರ)
ಪಾಲೆಸ್ಟೈನ್ ಹಮಾಸ್ ಬಂಡುಕೋರ ನೆಲೆಯಾದ ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿ (ಎಎಫ್‌ಪಿ ಚಿತ್ರ)   

ರಾಮಲ್ಲಾ, (ಪಶ್ಚಿಮ ದಂಡೆ): ಗಾಜಾಪಟ್ಟಿಯಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮದ್ ಅಬ್ಬಾಸ್ ಅವರು ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ.

ಇದೇ ವೇಳೆ ಅಮೆರಿಕದ ಮಧ್ಯಪ್ರವೇಶಕ್ಕೆ ಒತ್ತಾಯಿಸಿರುವ ಅಬ್ಬಾಸ್‌, 'ಪ್ಯಾಲೆಸ್ಟೀನ್‌ ಜನರ ಮೇಲೆ ಇಸ್ರೇಲ್‌ ಮಾಡುತ್ತಿರುವ ದಾಳಿಯನ್ನು ತಡೆಯಬೇಕು. ಸಂಘರ್ಷ ಶಮನಗಳಿಸುವ ನಿಟ್ಟಿನಲ್ಲಿ ಸಹಾಯ ಮಾಡಬೇಕು' ಎಂದು ಕೇಳಿಕೊಂಡಿದ್ದಾರೆ.

'ನಮ್ಮ ಜನರ ಮೇಲೆ ನಡೆಯುತ್ತಿರುವ ಇಸ್ರೇಲ್‌ ಆಕ್ರಮಣವನ್ನು ತಡೆಯಲು ಮತ್ತು ಕದನ ವಿರಾಮಕ್ಕೆ ನಾಂದಿ ಹಾಡಲು ನಾನು ಕೆಲಸ ಮಾಡುತ್ತಿದ್ದೇನೆ' ಎಂದು ಅಬ್ಬಾಸ್‌ ಅವರು ಬೈಡನ್‌ ಅವರಿಗೆ ತಿಳಿಸಿದ್ದಾರೆ.

'ಇಸ್ರೇಲ್‌ ದಾಳಿ ಕೊನೆಗೊಂಡಾಗ ಮಾತ್ರ ಶಾಂತಿ ಮತ್ತು ಸ್ಥಿರತೆ ಸಾಧ್ಯವಾಗುವುದು. ಶಾಂತಿಯ ಮರುಸ್ಥಾಪನೆಗೆ ನೀವು(ಬೈಡನ್‌) ಮಧ್ಯಪ್ರವೇಶಿಸಬೇಕು' ಎಂದು ಅಬ್ಬಾಸ್‌ ಒತ್ತಾಯಿಸಿದ್ದಾರೆ.

ಹಿಂಸಾಚಾರ ಕಡಿಮೆಗೊಳಿಸಿ, ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಮೆರಿಕವು ಎಲ್ಲ ರೀತಿಯ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಲಿದೆ ಎಂದು ಬೈಡನ್‌ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.