ADVERTISEMENT

ಪ್ಯಾರಿಸ್ ಒಪ್ಪಂದಕ್ಕೆ ಅಮೆರಿಕವನ್ನು ಸೇರಿಸುತ್ತೇವೆ: ಜೊ ಬೈಡನ್

ಫಲಿತಾಂಶ ಘೋಷಣೆಗೆ ಮುನ್ನವೇ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯ ಭರವಸೆ

ಪಿಟಿಐ
Published 5 ನವೆಂಬರ್ 2020, 6:22 IST
Last Updated 5 ನವೆಂಬರ್ 2020, 6:22 IST
ಜೊ ಬೈಡೆನ್
ಜೊ ಬೈಡೆನ್   

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಅಂತಿಮ ಹಂತಕ್ಕೆ ತಲುಪಿದ್ದು, ಫಲಿತಾಂಶ ಘೋಷಣೆಯಾಗುವ ಮೊದಲೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬೈಡನ್ ಅವರು ‘ನಮ್ಮ ಆಡಳಿತ ಹವಾಮಾನ ಬದಲಾವಣೆ ಕುರಿತಾದ ಐತಿಹಾಸಿಕ ಪ್ಯಾರಿಸ್ ಒಪ್ಪಂದಕ್ಕೆ ಮತ್ತೆ ಅಮೆರಿಕವನ್ನು ಸೇರಿಸಲಿದೆ'ಎಂದು ಪ್ರತಿಜ್ಞೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕ ಐತಿಹಾಸಿಕ ‘ಪ್ಯಾರಿಸ್ ಹವಾಮಾನ ಒಡಂಬಡಿಕೆ’ಯಿಂದ ಹೊರಬಂದಿರುವುದಾಗಿ ಸುದ್ದಿ ಪ್ರಕಟವಾಗಿತ್ತು. ಮೂರು ವರ್ಷಗಳ ಹಿಂದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಒಪ್ಪಂದದಿಂದ ಅಮೆರಿಕ ಹೊರಗುಳಿಯಲಿದೆ ಎಂದು ಪ್ರಕಟಿಸಿದ್ದರು.

ಈಗ ಚುನಾವಣೆಯಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿರುವ ಬೈಡನ್‌ ಅವರು ಫಲಿತಾಂಶ ಪ್ರಕಟವಾಗುವ ಮುನ್ನವೇ ‘ಟ್ರಂಪ್ ಆಡಳಿತ ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹೊರಬಂದಿತ್ತು. ನಮ್ಮ ಆಡಳಿತ, ಒಪ್ಪಂದದಲ್ಲಿ ಅಮೆರಿಕವನ್ನು ಸೇರಿಸಲಿದೆ'ಎಂದಿದ್ದಾರೆ.

ADVERTISEMENT

ಚುನಾವಣೆಯಲ್ಲಿ ಬೈಡನ್‌ ಅವರು ಗೆಲುವಿಗೆ ಅಗತ್ಯವಿರುವ 270ರಲ್ಲಿ 250 ಚುನಾವಣಾ ಮತಗಳನ್ನು ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ 213 ಮತಗಳನ್ನು ಪಡೆದಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ಬಿಡುಗಡೆ ಮಾಡಿದ ವರದಿಗಳಲ್ಲಿ ಉಲ್ಲೇಖವಾಗಿದೆ.

ಅಮೆರಿಕವು ಒಬಾಮಾ ಆಡಳಿತದಲ್ಲಿ 2016ರಲ್ಲಿ ಪ್ಯಾರಿಸ್ ಒಪ್ಪಂದವನ್ನು ಒಪ್ಪಿಕೊಂಡು, ಸಹಿ ಹಾಕಿತ್ತು.

‘ಈ ಒಪ್ಪಂದಿಂದ ಅಮೆರಿಕಕ್ಕೆ ಅನಾನುಕೂಲವಾಗುತ್ತದೆ. ಇದರಿಂದ ನಿರುದ್ಯೋಗ ಸೃಷ್ಟಿಯಾಗುತ್ತದೆ. ಇದು ಕೇವಲ ಚೀನಾ, ರಷ್ಯಾ ಮತ್ತು ಭಾರತದಂತಹ ದೇಶಗಳಿಗೆ ಪ್ರಯೋಜನಗಳನ್ನು ನೀಡುತ್ತದೆ’ ಎಂಬುದು ಟ್ರಂಪ್ ವಾದವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.