ADVERTISEMENT

ಕೆನಡಾ | ಗುಂಡಿನ ದಾಳಿ ಬಳಿಕ ಮತ್ತೆ ಬಾಗಿಲು ತೆರೆಯಲು ಸಜ್ಜಾದ ಕಪಿಲ್‌ ಶರ್ಮಾ ಕೆಫೆ

ಏಜೆನ್ಸೀಸ್
Published 20 ಜುಲೈ 2025, 10:16 IST
Last Updated 20 ಜುಲೈ 2025, 10:16 IST
   

ಮುಂಬೈ: ಗುಂಡಿನ ದಾಳಿ ನಡೆದ ಬಳಿಕ ಕೆನಡಾದ ಸರ್ರೆ ನಗರದಲ್ಲಿ ನಟ ಕಪಿಲ್‌ ಶರ್ಮಾ ಅವರ ‘ಕ್ಯಾಪ್ಸ್ ಕೆಫೆ’ ರೆಸ್ಟೋರೆಂಟ್‌ ಮತ್ತೆ ತೆರೆಯುತ್ತಿದೆ.

ಈ ಕುರಿತು ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ಕ್ಯಾಪ್ಸ್‌ ಕೆಫೆ ನಾಳೆ ಮತ್ತೆ ಬಾಗಿಲು ತೆರೆಯುತ್ತಿದೆ, ನಿಮ್ಮನ್ನು ಪ್ರೀತಿಯಿಂದ ಸ್ವಾಗತಿಸಲು ಸಜ್ಜಾಗಿದ್ದೇವೆ. ಬೆಳಿಗ್ಗೆ 8 ರಿಂದ ರಾತ್ರಿ 10 ಗಂಟೆಯವರೆಗೆ ನಿಮಗಾಗಿ ಕೆಫೆ ತೆರೆದಿರಲಿದೆ’ ಎಂದು ಬರೆದುಕೊಂಡಿದ್ದಾರೆ.

ಕಪಿಲ್‌ ಶರ್ಮಾ ಅವರು ಕೆನಡಾದ ಸರ್‍ರೆ ನಗರದಲ್ಲಿ ಹೊಸದಾಗಿ ಆರಂಭಿಸಿದ್ದ ‘ಕ್ಯಾಪ್ಸ್‌ ಕೆಫೆ’ ರೆಸ್ಟೋರೆಂಟ್‌ ಮೇಲೆ ಜುಲೈ 10ರಂದು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ದಾಳಿ ನಡೆಯುವಾಗ ಕೆಫೆಯ ಸಿಬ್ಬಂದಿ ಒಳಗೇ ಇದ್ದರು. ಅದೃಷ್ಟವಶಾತ್‌ ಯಾವುದೇ ಜೀವ ಹಾನಿಯಾಗಲೀ, ಯಾರಿಗೂ ಗಾಯಗಳಾಗಲೀ ಆಗಿರಲಿಲ್ಲ, ಆದರೆ ಕೆಫೆಗೆ ಹಾನಿಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು. 

ADVERTISEMENT

ಘಟನೆಗೆ ಪ್ರತಿಕ್ರಿಯಿಸಿದ್ದ ಶರ್ಮಾ, ‘ಘಟನೆ ಆಘಾತ ತರಿಸಿದೆ. ರುಚಿಕರವಾದ ಕಾಫಿ ಮತ್ತು ಸ್ನೇಹಮಯ ಸಂಭಾಷಣೆ ಮೂಲಕ ಜನರಿಗೆ ಸಂತೋಷವನ್ನು ತರುವ ಭರವಸೆಯೊಂದಿಗೆ ಕ್ಯಾಪ್ಸ್‌ ಕೆಫೆಯನ್ನು ತೆರೆದಿದ್ದೇವೆ. ಆ ಕನಸಿಗೆ ಪೆಟ್ಟು ಬಿದ್ದರೆ ಸಹಿಸುವುದಿಲ್ಲ. ನಾವು ಮತ್ತೆ ಎದ್ದು ನಿಲ್ಲುತ್ತೇವೆ. ಯಾವುದಕ್ಕೂ ಭಯ ಪಡುವುದಿಲ್ಲ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.