ಲಂಡನ್ : ಇಂಗ್ಲೆಂಡ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಭಾಷಣ ಮಾಡಿದರು. ಇದೇ ವೇಳೆ ಚುನಾವಣಾ ಹಿಂಸಾಚಾರ ಮತ್ತು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಪ್ರಕರಣ ವಿರೋಧಿ ಭಿತ್ತಿಪತ್ರ ಪ್ರದರ್ಶಿಸಿ ಗುಂಪೊಂದು ಭಾಷಣಕ್ಕೆ ಅಡ್ಡಿಪಡಿಸಿತು.
ಬ್ರಿಟನ್‌ನಲ್ಲಿರುವ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಯ ದೃಶ್ಯವನ್ನು ಹಂಚಿಕೊಂಡಿದೆ.
ಆಕ್ಸ್‌ಫರ್ಡ್ ವಿವಿಯ ಕೆಲ್ಲೋಗ್ ಕಾಲೇಜಿನಲ್ಲಿ ಮಮತಾ ಬ್ಯಾನರ್ಜಿ ಅವರು ‘ಪಶ್ಚಿಮ ಬಂಗಾಳದಲ್ಲಿ ಸಾಮಾಜಿಕ ಬೆಳವಣಿಗೆ–ಬಾಲಕಿಯರು ಮತ್ತು ಮಹಿಳಾ ಸಬಲೀಕರಣ’ ವಿಷಯದ ಕುರಿತು ಮಾತನಾಡುತ್ತಿದ್ದಾಗ ಸಿಂಗೂರ್‌ನಿಂದ ಟಾಟಾ ನ್ಯಾನೋ ಘಟಕ ಸ್ಥಳಾಂತರಿಸಿದ್ದನ್ನು ಪ್ಷೇಕ್ಷಕರೊಬ್ಬರು ನೆನಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಮತಾ, ಟಾಟಾದವರು ವಾಪಸ್ ಬಂದು ಖಡಗ್‌ಪುರ್ ಮತ್ತು ರಾಜಾರ್‌ಹಾಟ್‌ನಲ್ಲಿ ತಮ್ಮ ಕೈಗಾರಿಕೆ ಸ್ಥಾಪಿಸಿದ್ದಾರೆ. ಆರ್.ಜಿ.ಕರ್ ಪ್ರಕರಣ ನ್ಯಾಯಾಂಗದ ವ್ಯಾಪ್ತಿಯಲ್ಲಿದೆ. ಕೇಂದ್ರ ಸರ್ಕಾರದ ಸಂಸ್ಥೆ ತನಿಖೆ ಮಾಡುತ್ತಿದೆ ಎಂದರು.
ಚುನಾವಣಾ ಹಿಂಸಾಚಾರ ಕುರಿತ ಪ್ರಶ್ನೆಗೆ, ‘ ಈ ವೇದಿಕೆಯಲ್ಲಿ ರಾಜಕಾರಣ ಮಾಡಬೇಡಿ, ನೀವು ರಾಜ್ಯಕ್ಕೆ ಬಂದು ನಿಮ್ಮ ಪಕ್ಷವನ್ನು (ಸಿಪಿಎಂ) ಬಲವಾಗಿ ಪ್ರಶ್ನಿಸಿ’ ಎಂದ ಮಮತಾ, ತಾವು ಗಾಯಗೊಂಡಿದ್ದ ಫೋಟೋವೊಂದನ್ನು ತೋರಿಸಿ ‘ನನ್ನ ಕೊಲೆಗೆ ಯತ್ನ ನಡೆದಿತ್ತು’ ಎಂದರು. ಕೂಡಲೇ ಹಿಂದೆ ಕುಳಿತಿದ್ದ ಕೆಲವರು ಎದ್ದು ನಿಂತು ಭಿತ್ತಿಪತ್ರ ಹಿಡಿದು ಘೋಷಣೆ ಕೂಗಲು ಶುರು ಮಾಡಿದರು.
ಗದ್ದಲದ ನಡುವೆಯೂ ಅರ್ಧ ಗಂಟೆಗೂ ಹೆಚ್ಚು ಕಾಲ ಭಾಷಣ ಮಾಡಿದ ಮಮತಾ, ಆನಂತರ ಪ್ರೇಕ್ಷಕರ ಪ್ರಶ್ನೆಗಳಿಗೂ ಉತ್ತರಿಸಿದರು.
ಮಮತಾ ಬ್ಯಾನರ್ಜಿ ಅವರಿಗೆ ಆಕ್ಸ್‌ಫರ್ಡ್ ವಿ.ವಿಯಲ್ಲಿ ಮಾತನಾಡುವ ಆಹ್ವಾನ ಸಿಕ್ಕಿದ್ದಕ್ಕೆ ಭಾರತದಲ್ಲಿ ಇದೊಂದು ಗರ್ವದ ಸಂಗತಿ ಎಂದು ಪ್ರಶಂಸೆ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.