ADVERTISEMENT

ಶ್ರೀಲಂಕಾ ಹಿಂಸಾಚಾರ | ರಾಜಕಾರಣಿಗಳ ಮನೆಗಳಿಗೆ ಬೆಂಕಿ: 8 ಸಾವು, 200 ಜನರಿಗೆ ಗಾಯ

ಐಎಎನ್ಎಸ್
Published 10 ಮೇ 2022, 7:20 IST
Last Updated 10 ಮೇ 2022, 7:20 IST
ಶ್ರೀಲಂಕಾದಲ್ಲಿ ರಾಜಕಾರಣಿಯೊಬ್ಬರ ಮನೆಗೆ ಬೆಂಕಿ ಹಚ್ಚಿರುವುದು
ಶ್ರೀಲಂಕಾದಲ್ಲಿ ರಾಜಕಾರಣಿಯೊಬ್ಬರ ಮನೆಗೆ ಬೆಂಕಿ ಹಚ್ಚಿರುವುದು   

ಕೊಲಂಬೊ: ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಶ್ರಿಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿದ್ದು ಕನಿಷ್ಠ ಎಂಟು ಜನರು ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಸೇರಿದಂತೆ ಹಲವು ರಾಜಕಾರಣಿಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ರಾಷ್ಟ್ರ ರಾಜಧಾನಿಯಲ್ಲಿರುವ ರಾಜಪಕ್ಸ ಅವರ ಅಧಿಕೃತ ನಿವಾಸವನ್ನು ಸೋಮವಾರ ರಾತ್ರಿ ಸುತ್ತುವರಿದು, ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಬಳಿಕ ನಿವಾಸದ ಹೊರಗೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಈ ವೇಳೆ ರಾಜಪಕ್ಸ ಅವರನ್ನು ರಕ್ಷಿಸಲು ಮತ್ತುಪ್ರತಿಭಟನಾಕಾರರನ್ನು ಹತ್ತಿಕ್ಕಲು ಹೆಚ್ಚುವರಿಯಾಗಿರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಶ್ರುವಾಯು ಸಿಡಿಸಿ, ಲಾಠಿ ಚಾರ್ಜ್‌, ಜಲಫಿರಂಗಿ ಬಳಸಲಾಗಿದೆ. ಸೇನಾ ಸಿಬ್ಬಂದಿ ಮಧ್ಯರಾತ್ರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತು ದೇಶದಾದ್ಯಂತ ಜಾರಿಯಲ್ಲಿರುವ ಕರ್ಫ್ಯೂ ಅನ್ನುಬುಧವಾರದವರೆಗೆ ವಿಸ್ತರಿಸಲಾಗಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನ ಕಾರಣ ಶ್ರೀಲಂಕಾದಲ್ಲಿ ಕಳೆದೊಂದು ತಿಂಗಳಿನಿಂದ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ರಾಜಪಕ್ಸ ಸಂಪುಟದಲ್ಲಿದ್ದ ಇಬ್ಬರು ಸಚಿವರೂ ರಾಜೀನಾಮೆ ಘೋಷಿಸಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆರಾಜಪಕ್ಸ ಪಕ್ಷದ ಬೆಂಬಲಿಗರು, ದೊಣ್ಣೆ ಮತ್ತು ಕಲ್ಲುಗಳಿಂದ ಸೋಮವಾರ ದಾಳಿ ನಡೆಸಿದ್ದರು. ಪ್ರತಿಭಟನಾಕಾರರ ಟೆಂಟ್‌ಗಳಿಗೂ ಬೆಂಕಿ ಹಚ್ಚಿದ್ದರು. ಇದರಿಂದಾಗಿ ಹೋರಾಟವು ಹಿಂಸಾರೂಪಕ್ಕೆ ತಿರುಗಿದೆ.

ಆಡಳಿತ ಪಕ್ಷದ ಸಂಸದ ಅಮರಕೀರ್ತಿ ಅಥುಕೊರಲಾ ಅವರ ಅಂಗರಕ್ಷಕ, ಕೊಲಂಬೊ ಹೊರವಲಯದಲ್ಲಿರುವ ನಿಟ್ಟಂಬುವಾ ನಗರದಲ್ಲಿ ಪ್ರತಿಭಟನಾಕಾರರತ್ತ ಗುಂಡು ಹಾರಿಸಿದ್ದು, ಮೂವರು ಗಾಯಗೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು,ಸಂಸದ ಮತ್ತು ಅವರ ಅಂಗರಕ್ಷಕನ ಮೇಲೆ ಪ್ರತಿದಾಳಿ ನಡೆಸಿದ್ದಾರೆ.ಸಂಸದ ಮತ್ತು ಅಂಗರಕ್ಷಕನ ಮೃತದೇಹಗಳು ಕಟ್ಟಡವೊಂದರಲ್ಲಿ ಪತ್ತೆಯಾಗಿವೆ.

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಅವರು, ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟನ್ನು ಕೂಡಲೇ ಬಗೆಹರಿಸಬೇಕು ಮತ್ತು ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ರಾಷ್ಟ್ರಪತಿ ಗೊಟಬಯ ರಾಜಪಕ್ಸ ಅವರು ಸರ್ವ ಪಕ್ಷಗಳು ಒಂದಾಗಿ ಸರ್ಕಾರ ರಚಿಸುವಂತೆ ಕರೆ ನೀಡಿದ್ದಾರೆ. ಆದರೆ, ರಾಷ್ಟ್ರಪತಿ ರಾಜೀನಾಮೆವರೆಗೆ ಸರ್ಕಾರ ರಚಿಸಲು ಪಕ್ಷಗಳು ನಿರಾಕರಿಸಿವೆ.

ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳೂ ಸೋಮವಾರ ರಾಷ್ಟ್ರವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.