ಪಾಕಿಸ್ತಾನದ ಭದ್ರತಾ ಪಡೆಗಳು
–ರಾಯಿಟರ್ಸ್ ಚಿತ್ರ
ಇಸ್ಲಾಮಾಬಾದ್: ಹಿಂಸಾಚಾರದಿಂದಾಗಿ ಸಾವು–ನೋವು ಹೆಚ್ಚಿದ್ದರಿಂದ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಪಕ್ಷವು ತನ್ನ ಪ್ರತಿಭಟನೆಯನ್ನು ಬುಧವಾರ ಹಿಂಪಡೆದಿದೆ.
ಮಧ್ಯರಾತ್ರಿಯಲ್ಲಿ ಅಧಿಕಾರಿಗಳು ನಡೆಸಿದ ದೌರ್ಜನ್ಯದಿಂದ ಕನಿಷ್ಠ ನಾಲ್ವರ ಹತ್ಯೆಯಾಗಿದ್ದು, 50ಕ್ಕೂ ಹೆಚ್ಚು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಪಿಟಿಐ ಹೇಳಿಕೊಂಡಿದೆ. ಆದರೆ, ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ‘ನೂರಾರು’ ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮಾಜಿ ಪ್ರಧಾನಿಯ ಪತ್ನಿ ಬುಶ್ರಾ ಬೀಬಿ ಮತ್ತು ಖೈಬರ್ ಪಂಖ್ತುಖ್ವಾ ಪ್ರಾಂತ್ಯದ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ ಅವರು ಇಸ್ಲಾಮಾಬಾದ್‌ನತ್ತ ಕಾರ್ಯಕರ್ತರೊಂದಿಗೆ ಪ್ರತಿಭಟನಾ ರ‍್ಯಾಲಿಯನ್ನು ಮುನ್ನಡೆಸುತ್ತಿದ್ದಾರೆ ಎಂಬ ಸುದ್ದಿಯನ್ನು ಪಿಟಿಐ ಅಲ್ಲಗಳೆದಿದೆ.
ವಾಯವ್ಯ ಪ್ರಾಂತ್ಯದ ಅಬೋಟಾಬಾದ್ ಬಳಿಯ ಮನ್ಸೆಹ್ರಾ ಪಟ್ಟಣದಲ್ಲೇ ಬೀಬಿ ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಿರುವ ಪಿಟಿಐ, ‘ಫ್ಯಾಸಿಸ್ಟ್ ಮಿಲಿಟರಿ ಆಡಳಿತ’ದಲ್ಲಿ ಪಕ್ಷದ ಕಾರ್ಯಕರ್ತರ ‘ಹತ್ಯಾಕಾಂಡ’ ನಡೆದಿದೆ ಎಂದು ದೂರಿದೆ.
450ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಿಟಿಐ ಕಾರ್ಯಕರ್ತರ ಪ್ರತಿಭಟನೆಯಿಂದಾಗಿ ಎಂಟು ವಿಮಾನಗಳ ಸಂಚಾರ ರದ್ದಾದರೆ, 17 ವಿಮಾನಗಳ ಸಂಚಾರದಲ್ಲಿ ವಿಳಂಬವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಭಟನೆ ಸ್ಥಗಿತಗೊಂಡ ಬಳಿಕ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ.
ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಹಾಗೂ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ನೇತೃತ್ವದಲ್ಲಿ ಪಿಟಿಐ ಪಕ್ಷದ ಕಾರ್ಯಕರ್ತರು ಪೆಶಾವರದಿಂದ ಇಸ್ಲಾಮಾಬಾದ್‌ವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದರು. ದೇಶದಾದ್ಯಂತ ನವೆಂಬರ್ 24ರಿಂದ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವಂತೆ ಇಮ್ರಾನ್‌ಖಾನ್ ಅವರು ನ.13ರಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.