ADVERTISEMENT

ಅಕ್ಷತಾಮೂರ್ತಿಗೆ ರಿಷಿ ಸಿಕ್ಕಿದ್ದೆಲ್ಲಿ?: ಸುನಕ್‌ ಇಂಟರೆಸ್ಟಿಂಗ್‌ ಲವ್‌ಸ್ಟೋರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2022, 12:51 IST
Last Updated 25 ಅಕ್ಟೋಬರ್ 2022, 12:51 IST
   

ಇನ್ಫೊಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‌ ಸೋಮವಾರ ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರಿಟನ್‌ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಒಬ್ಬ ವ್ಯಕ್ತಿ ಉನ್ನತ ಹುದ್ದೆ ಏರಿದಾಗ ಆತನ ಕುರಿತು ಸಾಕಷ್ಟು ಕಥೆಗಳು ಹುಟ್ಟುವುದು, ಜಗತ್ತಿಗೆ ಆತನ ಇಡೀ ಕುಟುಂಬವೇ ಮಹಾನ್‌ ಎನಿಸುವುದು ಸಹಜ. ಆದರೆ ನಾರಾಯಣ ಮೂರ್ತಿಯಂತಹ ದಿಗ್ಗಜ ಉದ್ಯಮಿಯ ಪುತ್ರಿಯಾದ ಅಕ್ಷತಾ ಕಥೆ ಅದಕ್ಕೆ ಭಿನ್ನವಾಗಿದೆ. ಅಕ್ಷತಾ ಕೂಡ ಸುಧಾಮೂರ್ತಿಯವರಂತೆ ಬಹಳ ಸರಳ ಎಂಬದುನ್ನು ಸುನಕ್‌ ಅವರೊಮ್ಮೆ ಸಾರ್ವಜನಿಕವಾಗಿ ಹೇಳಿದ್ದರು.

‘ನನ್ನ ಹಾದಿಯ ಕುರಿತು ನೀನು ಏನು ಹೇಳುತ್ತೀಯ ಎಂಬುದು ಗೊತ್ತಿದೆ. ನಾನು ಏನೂ ಅಲ್ಲದಾಗ, ಅಂದರೆ 18 ವರ್ಷಗಳ ಹಿಂದೆ ನಿನ್ನ ಶ್ರೀಮಂತಿಕೆಯನ್ನು ಲೆಕ್ಕಿಸದೆ ನನ್ನನ್ನು ನೀನು ಸ್ವೀಕರಿಸಿದಾಗಲೇ ನಿನ್ನ ಪ್ರೀತಿ ನನಗೆ ಅರ್ಥವಾಗಿತ್ತು’ಎಂದು ಸುನಕ್‌ ಚುನಾವಣಾ ಪ್ರಚಾರದ ವೇಳೆ ಅಕ್ಷತಾ ಕುರಿತು ಹೇಳಿದ್ದರು.

ADVERTISEMENT

ನಾರಾಯಣ ಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಹಾಗೂ ರಿಷಿ ಸುನಕ್‌ ಮೊದಲು ಭೇಟಿಯಾಗಿದ್ದು ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ. ಅಕ್ಷತಾ ಜನಿಸಿದ್ದು ಮುಂಬೈನಲ್ಲಿ. 2 ವರ್ಷದವರಿದ್ದಾಗ ನಾರಾಯಣಮೂರ್ತಿ ಕುಟುಂಬ ಹುಬ್ಬಳಿಗೆ ಸ್ಥಳಾಂತರವಾಗುತ್ತೆ. ಸೂದಾಮೂರ್ತಿ ಅಕ್ಷತಾ ಅವರನ್ನು ಬೆಳೆಸಿದ ಪರಿ ನಿಜಕ್ಕೂ ಚೆನ್ನಾಗಿದೆ. ಎಂದಿಗೂ ಅವರು ಮಗಳನ್ನು ಐಷಾರಾಮಿ ಕಾರಿನಲ್ಲಿ ಕೂರಿಸಿ ಶಾಲೆಗೆ ಕಳುಹಿಸಲಿಲ್ಲ. ಬದಲಿಗೆ ಆಟೋರಿಕ್ಷಾದಲ್ಲಿಯೇ ಶಾಲೆಗೆ ಹೋದವರು ಅಕ್ಷತಾ.

ಬೆಂಗಳೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿದ ಅಕ್ಷತಾ ಉನ್ನತ ವ್ಯಾಸಂಗಕ್ಕೆ ಕ್ಯಾಲಿಫೋರ್ನಿಯಾಗೆ ತೆರಳುತ್ತಾರೆ. ಲಾಸ್‌ ಏಂಜಲಸ್‌ನಲ್ಲಿ ಫ್ಯಾಷನ್‌ ಡಿಸೈನ್‌ನಲ್ಲಿ ಡಿಪ್ಲೊಮಾ ಪಡೆಯುತ್ತಾರೆ. ಅದಾದ ಬಳಿಕ ಎಂಬಿಎಗಾಗಿ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯ ಸೇರುತ್ತಾರೆ. ಅಲ್ಲಿ ಅವರು ಮೊದಲು ರಿಷಿಯನ್ನು ಭೇಟಿಯಾಗುತ್ತಾರೆ. ಅಲ್ಲಿಂದ ಪ್ರೇಮಕಥೆ ಶುರುವಾಗುತ್ತದೆ.

ಓದಿನಲ್ಲಿ ಬುದ್ಧಿವಂತರಾಗಿದ್ದ ರಿಷಿ, ಆಕ್ಸಫರ್ಡ್‌ ವಿವಿಯಿಂದ ಡಿಗ್ರಿ ಪಡೆದು ಸ್ಟಾನ್‌ಫೋರ್ಡ್‌ಗೆ ಬಂದವರು. ಇಬ್ಬರ ಪರಿಚಯ, ಗೆಳೆತನ ಪ್ರೇಮಕ್ಕೆ ತಿರುಗುತ್ತದೆ. ಮನೆಯರವನ್ನು ಒಪ್ಪಿಸಿ 2009ರಲ್ಲಿ ಇಬ್ಬರೂ ಮದುವೆಯಾಗುತ್ತಾರೆ. ಬೆಂಗಳೂರಿನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಅಜೀಂ ಪ್ರೇಮ್‌ಜಿ, ಕಿರಣ್ ಮಜುಂದಾರ್-ಶಾ, ಅನಿಲ್ ಕುಂಬ್ಳೆ, ನಂದನ್ ಎಂ ನಿಲೇಕಣಿ, ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಪ್ರಕಾಶ್ ಪಡುಕೋಣೆ, ಸೈಯದ್ ಕಿರ್ಮಾನಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಾರೆ.

ಮದುವೆ ಪ್ರಾರಂಭಿಕ ವರ್ಷಗಳಲ್ಲಿ ಅಮೆರಿಕದಲ್ಲಿದ್ದ ಈ ಜೋಡಿ ಬಳಿಕ ಬ್ರಿಟನ್‌ಗೆ ಮರಳುತ್ತದೆ. ಕೃಷ್ಣ ಮತ್ತು ಅನೌಷ್ಕ್ ಎಂಬ ಇಬ್ಬರು ಮಕ್ಕಳು ಇವರಿಗೆ.

ಬ್ರಿಟನ್‌ನಲ್ಲಿ ‘ಅಕ್ಷತಾ ಡಿಸೈನ್‌’ ಎಂಬ ತಮ್ಮದೇ ಬ್ರ್ಯಾಂಡ್‌ ಹೊಂದಿದ್ದಾರೆ. ಅಲ್ಲಿ ಬಹುತೇಕ ಭಾರತೀಯ ವಿನ್ಯಾಸಗಳನ್ನೇ ಆಯ್ಕೆ ಮಾಡಿಕೊಂಡು ಪಾಶ್ಚಾತ್ಯ ಶೈಲಿಯಲ್ಲಿ ಪ್ರಸ್ತುಪಡಿಸಿದ್ದಾರೆ. ದೇಶದ ಹಳ್ಳಿಯ ಕಲಾವಿದರ ವಿನ್ಯಾಸವನ್ನು ಬಳಸುತ್ತಾರೆ. ಪ್ರತಿ ವಿನ್ಯಾಸದ ಹಿಂದಿನ ಅಧಿಕೃತತೆ, ಕಸೂತಿ, ಪರಂಪರೆಯನ್ನು ನೋಡುವುದಾಗಿ ಅಕ್ಷತಾ ಹೇಳಿದ್ದಾರೆ.

700 ಡಾಲರ್‌ ದಶಲಕ್ಷ ಆಸ್ತಿ ಹೊಂದಿರುವ ಹೆಸರಾಂತ ವಿನ್ಯಾಸಕಿ ಅಕ್ಷತಾ. ಇದು ಬ್ರಿಟನ್‌ ರಾಣಿ ದಿವಂಗತ ಎಲೆಜೆಬತ್‌ 2 ಆಸ್ತಿಗಿಂತ ಹೆಚ್ಚಂತೆ. ಇದರ ಹೊರತಾಗಿ ಅಕ್ಷತಾ ಟೆಂಡ್ರಿಸ್‌ ಹಣಕಾಸು ಸಂಸ್ಥೆಯಲ್ಲಿ ಪಾಲುದಾರರು. ಇನ್ಫೋಸಿಸ್‌ನಲ್ಲಿ 700 ದಶಲಕ್ಷ ಡಾಲರ್‌ ಮೌಲ್ಯದ ಷೇರು ಹೊಂದಿದ್ದಾರೆ. ಬ್ರಿಟನ್‌ ಕೆಲ ರೆಸ್ಟೊರೆಂಟ್‌ಗಳಲ್ಲಿ ಪಾಲು ಹೊಂದಿದ್ದಾರೆ. ಸುನಕ್‌–ಅಕ್ಷತಾ ಜೋಡಿ ಅಮೆರಿಕ, ಬ್ರಿಟನ್‌ನಲ್ಲಿ ಸಾಕಷ್ಟು ಆಸ್ತಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.