ADVERTISEMENT

ಓಮೈಕ್ರಾನ್‌: ಲಂಡನ್‌ನಲ್ಲಿ ಒಂದೇ ದಿನ 10 ಸಾವಿರ ಪ್ರಕರಣ

ನಿರ್ಬಂಧಕ್ಕೆ ವಿವಿಧ ದೇಶಗಳ ಒಲವು * ನೆದರ್‌ಲ್ಯಾಂಡ್‌ನಲ್ಲಿ ಲಾಕ್‌ಡೌನ್

ಪಿಟಿಐ
Published 19 ಡಿಸೆಂಬರ್ 2021, 18:13 IST
Last Updated 19 ಡಿಸೆಂಬರ್ 2021, 18:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಇಂಗ್ಲೆಂಡ್‌ನಲ್ಲಿ ಶನಿವಾರ ಒಂದೇ ದಿನ 10 ಸಾವಿರಕ್ಕೂ ಹೆಚ್ಚು ಓಮೈಕ್ರಾನ್‌ ಸೋಂಕು ಪ್ರಕರಣಗಳು ವರದಿಯಾಗಿವೆ. ದಿನವೊಂದರಲ್ಲಿ ದಾಖಲಾದ ಅತ್ಯಧಿಕ ಪ್ರಕರಣಗಳು ಇವಾಗಿವೆ. ಅಲ್ಲದೆ, ಒಟ್ಟಾರೆಯಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ 90 ಸಾವಿರಕ್ಕೆ ಏರಿದೆ.

ಯುಕೆ ಆರೋಗ್ಯ ಭದ್ರತಾ ಸಂಸ್ಥೆಯು, ಓಮೈಕ್ರಾನ್‌ನ 10,059 ಪ್ರಕರಣಗಳು ದೃಢಪಟ್ಟಿವೆ. ಇದು, ಶುಕ್ರವಾರ ವರದಿಯಾಗಿದ್ದ (3,201) ಪ್ರಕರಣಗಳಿಗಿಂತ ಮೂರು ಪಟ್ಟು ಹೆಚ್ಚು. ಈ ಮೂಲಕ ಹೊಸ ತಳಿಯ ಪ್ರಕರಣಗಳ ಸಂಖ್ಯೆ 24,968ಕ್ಕೆ ಏರಿದೆ ಎಂದು ತಿಳಿಸಿದೆ.

ಕೋವಿಡ್‌ನಿಂದ ಶುಕ್ರವಾರ 111 ಮಂದಿ ಮೃತಪಟ್ಟಿದ್ದಾರೆ. ಓಮೈಕ್ರಾನ್‌ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿದೆ. ಸೋಂಕು ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಹೇರಲು ಚಿಂತನೆ ನಡೆದಿದೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಸಾಜಿದ್‌ ಜಾವಿದ್ ತಿಳಿಸಿದ್ದಾರೆ.

ADVERTISEMENT

‘ಅಂಕಿ–ಅಂಶ ಆಧರಿಸಿ ವಿಜ್ಞಾನಿಗಳು, ಪರಿಣಿತರ ಜೊತೆಗೆ ಚರ್ಚಿಸುತ್ತಿದ್ದೇವೆ. ಸೂಕ್ಷ್ಮವಾಗಿ ಪರಿಸ್ಥಿತಿ ಗಮನಿಸುತ್ತಿದ್ದೇವೆ’ ಎಂದರು. ‘ಹೊಸ ನಿರ್ಬಂಧಗಳು ಅನಿವಾರ್ಯ’ ಎಂದು ಮೇಯರ್ ಸಾದಿಕ್‌ ಖಾನ್‌ ಹೇಳಿದರು.

‘ಓಮೈಕ್ರಾನ್‌ ಏರಿಕೆ ಆತಂಕ ಮೂಡಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಬಹುತೇಕ 30 ಸಾವಿರ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟಾರೆ, ಸೋಂಕು ಪ್ರಮಾಣ ಏರಿಕೆಯ ಹಾದಿಯಲ್ಲಿದೆ’ ಎಂದು ಹೇಳಿದರು.

ಸೋಂಕು ತಡೆಗೆ ಕೆಲವೊಂದು ಕಾರ್ಯಕ್ರಮಗಳಿಗೆ ಕೋವಿಡ್ ಪಾಸ್ ಹಾಗೂ ಮಾಸ್ಕ್‌ ಕಡ್ಡಾಯ ಮಾಡುವುದು, ಮನೆಯಿಂದಲೇ ಕೆಲಸ ಮಾಡುವ ಪ್ರವೃತ್ತಿಗೆ ಉತ್ತೇಜನ ನೀಡುವ ಕ್ರಮವು ಚಿಂತನೆಯಲ್ಲಿದೆ ಎಂದರು.

ಸೋಂಕು ಏರಿಕೆ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್‌ನಲ್ಲಿ ನಿರ್ಬಂಧ ಬಿಗಿಗೊಳಿಸಿದ್ದರೆ, ವೇಲ್ಸ್‌ನಲ್ಲಿ ಕ್ರಿಸ್‌ಮಸ್‌ ಪೂರ್ವಭಾವಿಯಲ್ಲಿ ನೈಟ್‌ಕ್ಲಬ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಸೋಂಕು ಭೀತಿ: ವಿವಿಧೆಡೆ ನಿರ್ಬಂಧ
ನೆದರ್‌ಲ್ಯಾಂಡ್ಸ್ (ಎ.ಪಿ):
ಓಮೈಕ್ರಾನ್‌ ಸೋಂಕು ತಡೆ ಕ್ರಮವಾಗಿ ಯೂರೋಪ್‌ನ ವಿವಿಧ ರಾಷ್ಟ್ರಗಳು ಮತ್ತೆ ಲಾಕ್‌ಡೌನ್‌ಗೆ ಒಲವು ತೋರುತ್ತಿವೆ. ನೆದರಲ್ಯಾಂಡ್‌ ಮತ್ತೆ ಲಾಕ್‌ಡೌನ್‌ ಘೋಷಿಸಿದೆ.

ಅಗತ್ಯ ಸೇವೆ ಹೊರತುಪಡಿಸಿ, ಶಾಲೆ, ವಿಶ್ವವಿದ್ಯಾಲಯಗಳು, ಬಾರ್, ರೆಸ್ಟೋರಂಟ್‌ಗಳು ಸೇರಿ ಎಲ್ಲ ವಹಿವಾಟು ಜನವರಿ 14ರವರೆಗೆ ಬಂದ್ ಆಗಲಿವೆ ಎಂದು ಪ್ರಭಾರಿ ಪ್ರಧಾನಿ ಮಾರ್ಕ್‌ ರೂಟೆ ತಿಳಿಸಿದ್ದಾರೆ.

ಓಮೈಕ್ರಾನ್‌ ಪರಿಣಾಮ ಕೋವಿಡ್‌ನ ಐದನೇ ಅಲೆ ಕಾಣಿಸಿಕೊಳ್ಳುತ್ತಿದೆ. ಲಾಕ್‌ಡೌನ್‌ ಅನಿವಾರ್ಯ. ಜನತೆ ಹೊಸ ವರ್ಷ, ಕ್ರಿಸ್‌ಮಸ್‌ ವೇಳೆ ನಾಲ್ವರು, ಉಳಿದಂತೆ ಇಬ್ಬರು ಅತಿಥಿಗಳನ್ನಷ್ಟೇ ಆಹ್ವಾನಿಸಬಹುದು ಎಂದಿದ್ದಾರೆ.

ಫ್ರಾನ್ಸ್, ಸೈಪ್ರಸ್‌, ಆಸ್ಟ್ರೀಯಾ, ಡೆನ್ಮಾರ್ಕ್‌, ಜರ್ಮನಿ ಈಗಾಗಲೇ ವಿದೇಶ ಪ್ರಯಾಣದ ಮೇಲೆ ನಿರ್ಬಂಧ ಹೇರಿವೆ. ಪ್ಯಾರಿಸ್‌ನಲ್ಲಿ ಹೊಸವರ್ಷ ಮುನ್ನಾದಿನದ ಕಾರ್ಯಕ್ರಮ ರದ್ದಾಗಿದೆ. ಐರ್ಲೆಂಡ್‌ನಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬಂದಿದೆ.

ಇರಾನ್‌ನಲ್ಲಿ ಮೊದಲ ಪ್ರಕರಣ: ಇರಾನ್‌ನಲ್ಲಿ ಭಾನುವಾರ ಮೊದಲ ಓಮೈಕ್ರಾನ್‌ ಸೋಂಕು ಪತ್ತೆಯಾಗಿದೆ. ಜಾಗತಿಕವಾಗಿ ರೂಪಾಂತರ ತಳಿ ಪತ್ತೆಯಾದ ತಿಂಗಳಲ್ಲಿಯೇ ಇರಾನ್‌ಗೂ ಪ್ರವೇಶಿಸಿದೆ.

ವಿಶ್ವ ಆರೋಗ್ಯ ಸಂಘಟನೆಯು ಶನಿವಾರವಷ್ಟೇ ಓಮೈಕ್ರಾನ್‌ ಸೋಂಕು ಒಟ್ಟಾರೆ 89 ದೇಶಗಳಲ್ಲಿ ಕಾಣಿಸಿಕೊಂಡಿದೆ. ಸಮುದಾಯದಲ್ಲಿ ಮೂರು ದಿನದಲ್ಲಿ ಒಂದೂವರೆ ಪಟ್ಟು ವೇಗವಾಗಿ ಹರಡಲಿದೆ ಎಂದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.