ADVERTISEMENT

ಮಹಾತ್ಮ ಗಾಂಧಿಗೆ ಮರಣೋತ್ತರ ಪ್ರಶಸ್ತಿ: ಅಮೆರಿಕ ಕಾಂಗ್ರೆಸ್‌ನಿಂದ ಘೋಷಣೆ

ಅಮೆರಿಕ ಕಾಂಗ್ರೆಸ್‌ನಿಂದ ಘೋಷಣೆ

ಪಿಟಿಐ
Published 2 ಅಕ್ಟೋಬರ್ 2018, 12:20 IST
Last Updated 2 ಅಕ್ಟೋಬರ್ 2018, 12:20 IST
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ   

ವಾಷಿಂಗ್ಟನ್‌ : ಶಾಂತಿ ಮತ್ತು ಅಹಿಂಸಾ ಹೋರಾಟಗಳನ್ನು ಸಾರಿ, ಅದಕ್ಕೆ ಉತ್ತೇಜನ ನೀಡಿದ ಮಹಾತ್ಮ ಗಾಂಧಿ ಸಾಧನೆಯನ್ನು ಪರಿಗಣಿಸಿ ಅವರಿಗೆ ಮರಣೋತ್ತರ ಚಿನ್ನದ ಪದಕ ನೀಡಲುಅಮೆರಿಕ ಕಾಂಗ್ರೆಸ್‌ ನಿರ್ಣಯ ತೆಗೆದುಕೊಂಡಿದೆ.

ಅಮೆರಿಕ ಹೌಸ್‌ ಆಫ್‌ ರೆಪ್ರೆಸೆಂಟಿಟಿವ್‌ನಲ್ಲಿ ನ್ಯೂಯಾರ್ಕ್‌ ಪ್ರತಿನಿಧಿಸುವ ಕಾಂಗ್ರೆಸ್‌ನ ಮಹಿಳಾ ಸಂಸದೆ ಕ್ಯಾರೊಲಿನ್‌ ಮಾಲೊನಿ ಅವರು ಸೆಪ್ಟೆಂಬರ್‌ 23ರಂದು ಈ ಸಂಬಂಧ ಗೊತ್ತುವಳಿಯನ್ನು (ಎಚ್‌ ಆರ್‌6916) ಮಂಡಿಸಿದರು. ಇದಕ್ಕೆ ಭಾರತ ಮೂಲದ ಅಮೆರಿಕ ಸಂಸದರಾದ ಅಮಿ ಬೆರಾ, ರಾಜಾ ಕೃಷ್ಣಮೂರ್ತಿ,ರೊ ಖನ್ನಾ, ಪ್ರಮೀಳಾ ಜಯಪಾಲ್‌ ಅವರು ಬೆಂಬಲ ಸೂಚಿಸಿದ್ದಾರೆ.

‘ನಿಲುವಳಿಯನ್ನು ಈಗಾಗಲೇ ಅಂಗೀಕರಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲು ಹಣಕಾಸು ಸೇವೆ ಸಮಿತಿ ಹಾಗೂ ಆಡಳಿತ ವಿಭಾಗಕ್ಕೆ ಕಳುಹಿಸಿಕೊಡಲಾಗಿದೆ’ ಎಂದು ಭಾರತ ಕುರಿತ ಕಾಂಗ್ರೆಸ್‌ನ ಸ್ಥಾಯಿ ಸಮಿತಿಯ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್‌ ತಿಳಿಸಿದ್ದಾರೆ.

ADVERTISEMENT

ಅಮೆರಿಕ ಕಾಂಗ್ರೆಸ್‌ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ಕೆಲವೇ ಕೆಲವು ವಿದೇಶಿಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮದರ್‌ ತೆರೇಸಾ (1997) ನೆಲ್ಸನ್‌ ಮಂಡೇಲಾ (1998) ಪೋಪ್‌ಜಾನ್‌ ಪೌಲ್‌ 2 (2000) ದಲೈಲಾಮಾ (2006) ಅಂಗ್‌ಸಾನ್‌ ಸೂಕಿ (2008) ಮೊಹಮ್ಮದ್‌ ಯೂನಸ್‌ (2010) ಸಿಮೋನ್‌ ಪೆರೇಸ್‌ ಈ ಪ್ರಶಸ್ತಿಗೆ ಪಾತ್ರರಾಗಿದ್ದರು.

‘ಮಾನವ ಹಕ್ಕು ಹೋರಾಟದ ನಿಟ್ಟಿನಲ್ಲಿ ಇಡೀ ಜಗತ್ತಿಗೆ ಅವರು ಮಾದರಿಯಾಗಿದ್ದಾರೆ.ಜನಾಂಗೀಯ ತಾರತಮ್ಯ ನಿವಾರಣೆ ಹೋರಾಟ ನಡೆಸಿದ ಮಾರ್ಟಿನ್‌ ಲೂಥರ್‌ಕಿಂಗ್‌, ವರ್ಣಬೇಧ ನೀತಿ ಹೋರಾಡಿದ ನೆಲ್ಸನ್‌ ಮಂಡೇಲಾ ಅವರಿಗೂ ಗಾಂಧಿ ಅವರೇ ಸ್ಪೂರ್ತಿಯಾಗಿದ್ದರು. ಸಮಾಜ ಸೇವಕಿಯಾಗಿ ಗಾಂಧಿ ಅವರು ನನಗೆ ನಿತ್ಯವೂ ಸ್ಫೂರ್ತಿದಾಯಕವಾಗಿದ್ದು, ಇಡೀ ವಿಶ್ವದಲ್ಲಿ ಬದಲಾವಣೆ ತರಲು ಗಾಂಧಿ ಮಾರ್ಗದಲ್ಲಿ ನಡೆಯಬೇಕು’ ಎಂದು ಮಾಲೊನಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.