ADVERTISEMENT

ಭಾರತೀಯರಿಂದ ಅಮೆರಿಕಕ್ಕೆ ಭಾರಿ ಅನುಕೂಲ: ಟ್ರಂಪ್ ‘ಆ’ ನಿರ್ಧಾರಕ್ಕೆ ಮಸ್ಕ್ ಅಸಹಮತ

ಪಿಟಿಐ
Published 1 ಡಿಸೆಂಬರ್ 2025, 13:35 IST
Last Updated 1 ಡಿಸೆಂಬರ್ 2025, 13:35 IST
ಎಲಾನ್‌ ಮಸ್ಕ್‌
ಎಲಾನ್‌ ಮಸ್ಕ್‌   

ನ್ಯೂಯಾರ್ಕ್‌: ‘ಪ್ರತಿಭಾವಂತ ಭಾರತೀಯರಿಂದ ಅಮೆರಿಕವು ದೊಡ್ಡ ಮಟ್ಟದ ಲಾಭ ಪಡೆದುಕೊಂಡಿದೆ. ಎಚ್‌1ಬಿ ವೀಸಾ ಕಾರ್ಯಕ್ರಮಕ್ಕೆ ನಾನು ಬೆಂಬಲ ವ್ಯಕ್ತಪಡಿಸುತ್ತೇನೆ. ಈಗ ಅದನ್ನು ಸ್ಥಗಿತಗೊಳಿಸಿರುವುದು ಅಮೆರಿಕಕ್ಕೆ ನೈಜವಾಗಿ ಹಾನಿ ಉಂಟುಮಾಡಲಿದೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ’ ಎಂದು ಸ್ಪೇಸ್‌ಎಕ್ಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.

ಜೆರೋಧಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್‌ ಕಾಮತ್‌ ಅವರು ನಡೆಸಿಕೊಡುವ ‘ಪೀಪಲ್‌ ಬೈ ಡಬ್ಲ್ಯುಟಿಎಫ್‌’ ಪಾಡ್‌ಕಾಸ್ಟ್‌ ಸರಣಿಯಲ್ಲಿ ಪಾಲ್ಗೊಂಡು ಈ ಮಾತು ಹೇಳಿದ್ದಾರೆ.

‘ಹೌದು. ಭಾರತದ ಪ್ರತಿಭಾವಂತರಿಂದ ಅಮೆರಿಕವು ದೊಡ್ಡ ಮಟ್ಟದ ಲಾಭ ಪಡೆದುಕೊಂಡಿತು. ವೀಸಾವು ಒಂದಿಷ್ಟು ದುರಪಯೋಗ ಆಗುತ್ತಿರಬಾರದು, ಆದರೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು’ ಎಂದು ಪ್ರತಿಪಾದಿಸಿದ್ದಾರೆ.

ADVERTISEMENT

ಒಂದು ಹಂತದವರೆಗೂ ವಲಸೆ ವಿರೋಧಿ ನೀತಿಯಾಗಿ ಅಮೆರಿಕ ಬದಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವಿಚಾರಕ್ಕೆ ಹಲವು ಅಭಿಪ್ರಾಯಗಳಿರುತ್ತವೆ. ಯಾವುದೇ ಒಮ್ಮತವಿಲ್ಲ. ಆದರೂ ಬೈಡನ್‌ ಸರ್ಕಾರದ ಅವಧಿಯಲ್ಲಿ ಎಲ್ಲರಿಗೂ ಮುಕ್ತವಾಗಿತ್ತು. ಗಡಿಯಲ್ಲೂ ಯಾವುದೇ ನಿಯಂತ್ರಣವಿರಲಿಲ್ಲ. ಗಡಿ ನಿಯಂತ್ರಿಸದೇ, ದೇಶವೆಂದು ಕರೆಯಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

‘ಬೈಡನ್‌ ಅವಧಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ವಲಸಿಗರು ದೇಶದೊಳಗೆ ಪ್ರವೇಶಿಸಿ, ಋಣಾತ್ಮಕ ಸಮಸ್ಯೆ ತಂದಿಟ್ಟರು. ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದವರಿಗೂ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡಿದರೆ, ನಷ್ಟ ಹೆಚ್ಚು. ಅದಕ್ಕೆ ಕಡಿವಾಣ ಹಾಕುವುದು ಅಗತ್ಯ’ ಎಂದು ವಿವರಿಸಿದ್ದಾರೆ.

ಹಣದ ಹಿಂದೆ ಬೀಳದಿರಿ:

‘ಹಣ ಗಳಿಸಬೇಕೆಂದವರು ಹಣದ ಹಿಂದೆ ಬೀಳಬಾರದು. ನೀವು ಏನು ಪಡೆಯುತ್ತಿರೋ, ಅದಕ್ಕಿಂತ ಹೆಚ್ಚಿನದನ್ನು ನೀಡಿ. ಸಮಾಜಕ್ಕೆ ನೀಡುವುದನ್ನು ಮುಂದುವರಿಸಿ. ಮೌಲ್ಯಯುತವಾದ ಉಪಯುಕ್ತ ವಸ್ತು ಹಾಗೂ ಸೇವೆಗಳನ್ನು ನೀಡಿದರೆ, ಹಣ ನೈಸರ್ಗಿಕವಾಗಿ ನಿಮ್ಮ ಹಿಂದೆಯೇ ಬರುತ್ತದೆ’ ಎಂದು ಯುವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ. 

ನಿಖಿಲ್‌ ಕಾಮತ್‌–ಎಲಾನ್‌ ಮಸ್ಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.