ADVERTISEMENT

ಮ್ಯಾನ್ಮಾರ್ ತುರ್ತು ಪರಿಸ್ಥಿತಿ: ಅಧ್ಯಕ್ಷ ಪಟ್ಟದತ್ತ ಸೇನಾ ಮುಖ್ಯಸ್ಥ?

ಪಿಟಿಐ
Published 2 ಫೆಬ್ರುವರಿ 2021, 3:48 IST
Last Updated 2 ಫೆಬ್ರುವರಿ 2021, 3:48 IST
ಹಂಗಾಮಿ ಅಧ್ಯಕ್ಷ ಮೈನ್‌ ಸ್ವೀ 
ಹಂಗಾಮಿ ಅಧ್ಯಕ್ಷ ಮೈನ್‌ ಸ್ವೀ    

ಬ್ಯಾಂಕಾಕ್‌: ಮ್ಯಾನ್ಮಾರ್‌ನಲ್ಲಿ ತುರ್ತು ಪರಿಸ್ಥಿತಿ ಹೇರಿರುವ ಸೇನೆಯು, ಮ್ಯಾನ್ಮಾರ್ ಉಪಾಧ್ಯಕ್ಷರಾಗಿರುವ ಮೈನ್‌ ಸ್ವೀ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಒಂದು ವರ್ಷದ ಅವಧಿಗೆ ನೇಮಕ ಮಾಡಿದೆ. ನಾಗರಿಕ ಹೋರಾಟಗಳ ನಾಯಕಿ ಆಂಗ್‌ ಸಾನ್ ಸೂಕಿ ಸೇರಿದಂತೆ ಹಲವು ಮುಖಂಡರನ್ನು ಸೇನೆಯು ಬಂಧನದಲ್ಲಿರಿಸಿದೆ.

ಮೈ ಸ್ವೀ ಅಧ್ಯಕ್ಷರೆಂದು ಘೋಷಣೆಯಾಗುತ್ತಿದ್ದಂತೆ ಅವರು ಸೋಮವಾರ ದೇಶದ ಅಧಿಕಾರವನ್ನು ಸೇನಾ ಕಮಾಂಡರ್‌, ಹಿರಿಯ ಜನರಲ್‌ ಮಿನ್‌ ಆಂಗ್‌ ಲೈಂಗ್‌ಗೆ ಹಸ್ತಾಂತರಿಸಿದ್ದಾರೆ.

2008ರಲ್ಲಿ ಸಂವಿಧಾನದ ಕರಡು ಸಿದ್ಧಪಡಿಸಿದ್ದ ಸೇನೆಯು ರಾಷ್ಟ್ರೀಯ ತುರ್ತು ಪರಿಸ್ಥಿತಿ ಎದುರಾದರೆ, ಅಧ್ಯಕ್ಷರು ಸೇನಾ ಮುಖ್ಯಸ್ಥರಿಗೆ ಅಧಿಕಾರ ಹಸ್ತಾಂತರಿಸಬಹುದು ಎಂದು ಉಲ್ಲೇಖಿಸಿತ್ತು. ಆ ಮೂಲಕ ಸೇನೆಯು ದೇಶದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಬಹುದಾಗಿದೆ.

ADVERTISEMENT

2011ರಿಂದ ಮಿನ್‌ ಆಂಗ್‌ ಲೈಂಗ್‌ (64) ಶಸ್ತ್ರಸ್ತ್ರ ಪಡೆಗಳ ಮುಖ್ಯಸ್ಥರಾಗಿದ್ದು, ಶೀಘ್ರದಲ್ಲಿಯೇ ನಿವೃತ್ತಿಯಾಗಲಿದ್ದಾರೆ. ವರ್ಷದಲ್ಲಿ ಚುನಾವಣೆ ನಡೆಸುವುದಾಗಿ ಸೇನೆಯೇ ಹೇಳಿರುವುದರಿಂದ, ಚುನಾಯಿತ ಅಧ್ಯಕ್ಷನಾಗಿ ಮಿನ್‌ ಆಂಗ್‌ ದೇಶದ ಚುಕ್ಕಾಣಿ ಹಿಡಿಯುವ ಹಾದಿಯಲ್ಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಂಗ್‌ ಸಾನ್‌ ಸೂ ಕಿ ನೇತೃತ್ವದ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ ಪಕ್ಷವು ಸಂಸತ್‌ನ 476 ಸ್ಥಾನಗಳ ಪೈಕಿ 396ರಲ್ಲಿ ಜಯ ಗಳಿಸಿತ್ತು. ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸೇನೆ ಆರೋಪಿಸಿತ್ತು. ದೇಶದಲ್ಲಿ ದಂಗೆಯನ್ನು ಸಮರ್ಥಿಸಿಕೊಂಡಿರುವ ಸೇನೆಯು, ಸರ್ಕಾರವು ಚುನಾವಣೆಯ ಅಕ್ರಮಗಳ ಆರೋಪಗಳಿಂದ ಹೊರಬರಲು ಸಾಧ್ಯವಾಗಿಲ್ಲ ಎಂದಿದೆ.

ಆಂಗ್‌ ಸಾನ್ ಸೂಕಿ ಮತ್ತು ಹಿರಿಯ ಜನರಲ್‌ ಮಿನ್‌ ಆಂಗ್‌ ಲೈಂಗ್‌

'ಮಿನ್‌ ಆಂಗ್‌ ಲೈಂಗ್‌ ಅವರ ನಿವೃತ್ತಿ ಸಮೀಪಿಸುತ್ತಿದ್ದು, ಅವರು ಉನ್ನತ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿರುವಂತೆ ಕಾಣುತ್ತಿದೆ' ಎಂದು ಏಷಿಯಾ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಗೆರಾರ್ಡ್‌ ಮೆಕಾರ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಮ್ಯಾನ್ಮಾರ್‌ನ ಈಶಾನ್ಯ ಭಾಗದಲ್ಲಿನ ಸೇನಾ ಕಾರ್ಯಾಚರಣೆಯಲ್ಲಿ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯ ಕಾರಣಗಳಿಂದಾಗಿ 2019ರಲ್ಲಿ ಅಮೆರಿಕ ಸರ್ಕಾರ ಮಿನ್‌ ಆಂಗ್‌ ಲೈನ್‌ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿದೆ.

ಸೇನಾ ಕಾರ್ಯಾಚರಣೆಯಲ್ಲಿ ಸುಮಾರು 7,00,000 ಮಂದಿ ರೊಹಿಂಗ್ಯಾ ಅಲ್ಪಸಂಖ್ಯಾತರನ್ನು ಓಡಿಸಲಾಗಿತ್ತು, ಅವರ ಮನೆಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ಹಲವು ರೀತಿಯ ದೌರ್ಜನ್ಯ ನಡೆಸಲಾಗಿತ್ತು. ಆ ಬಗ್ಗೆ ತನಿಖೆ ಕೈಗೊಂಡಿದ್ದ ಮೈನ್‌ ಸ್ವೀ, ಸೇನೆಯ ಮೇಲಿನ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದರು ಹಾಗೂ ಸೇನೆಯು ಕಾನೂನು ಬದ್ಧವಾಗಿ ವರ್ತಿಸಿದೆ ಎಂದಿದ್ದರು.

ಸೇನಾ ಮುಖ್ಯಸ್ಥ ಮಿನ್‌ ಆಂಗ್‌ ಲೈಂಗ್‌ ಜೊತೆಗೆ ವ್ಯಾಪಾರ ಸಂಬಂಧವನ್ನು ಅಮೆರಿಕ ಸರ್ಕಾರ 2019ರಲ್ಲಿ ನಿಷೇಧಿಸಿತು. ಅವರು ಅಮೆರಿಕ ಪ್ರವೇಶಿಸುವುದಕ್ಕೂ ನಿರ್ಬಂಧ ಹೇರಲಾಗಿದೆ. 2018ರಲ್ಲಿ ಮಿನ್‌ ಆಂಗ್‌ ಸೇರಿದಂತೆ ಮ್ಯಾನ್ಮಾರ್‌ನ ಹಲವು ಅಧಿಕಾರಿಗಳ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಖಾತೆಗಳನ್ನು ತೆಗೆದು ಹಾಕಲಾಗಿದೆ.

ಮೈನ್‌ ಸ್ವೀ (69) ಮ್ಯಾನ್ಮಾರ್‌ನ ಮಹಾನಗರ ಯಾಂಗಾಂಗ್‌ನ ಮಾಜಿ ಮುಖ್ಯಮಂತ್ರಿಯಾಗಿದ್ದವು ಹಾಗೂ ಅಲ್ಲಿನ ಪ್ರಾದೇಶಿಕ ಸೇನೆಯನ್ನು ಮುನ್ನಡೆಸಿದ್ದರು. 2007ರಲ್ಲಿ ಸನ್ಯಾಸಿ ನೇತೃತ್ವದಲ್ಲಿ ನಡೆದಿದ್ದ ಕ್ರಾಂತಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಯಾಫ್ರನ್‌ ರೆಸಲ್ಯೂಷನ್‌ (ಕೇಸರಿ ಕ್ರಾಂತಿ) ಎಂದು ಗುರುತಿಸಿಕೊಂಡಿತು. ಆ ಸಮಯದಲ್ಲಿ ಯಾಂಗಾಂಗ್‌ನಲ್ಲಿ ಕಾನೂನು ವ್ಯವಸ್ಥೆ ಪುನಶ್ಚೇತನದ ಹೊಣೆಯನ್ನು ಮೈನ್‌ ಸ್ವೀ ವಹಿಸಿದ್ದರು. ಹೋರಾಟದಲ್ಲಿ ಹತ್ತಾರು ಜನರು ಸಾವಿಗೀಡಾದರು ಹಾಗೂ ನೂರಾರು ಜನರನ್ನು ಬಂಧಿಸಲಾಗಿತ್ತು.

ಇನ್ನಷ್ಟು ಓದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.