ಕೇಪ್ ಕನಾವರಲ್/ನ್ಯೂಯಾರ್ಕ್: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಎಂಟು ದಿನ ಇದ್ದು ವಾಪಸ್ ಬರಬೇಕಿದ್ದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರ ಯಾನವು, ಅನಿರೀಕ್ಷಿತ ತಿರುವುಗಳನ್ನು ಪಡೆಯಿತು. ಅವರ ಯಾನಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಇಡೀ ಜಗತ್ತು ತುದಿಗಾಲ ಮೇಲೆ ನಿಂತು ಗಮನಿಸುವಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಈ ಯಾನವು ಸುನಿತಾ ಮತ್ತು ವಿಲ್ಮೋರ್ ಅವರ ಪಾಲಿಗೆ ಜೀವಮಾನದ ಪಯಣದಂತೆ ಆಯಿತು. ಜೂನ್‌ನಿಂದಲೂ ತಮ್ಮ ನಿವಾಸವಾಗಿದ್ದ ಐಎಸ್‌ಎಸ್‌ಗೆ ಸುನಿತಾ ಮತ್ತು ವಿಲ್ಮೋರ್ ವಿದಾಯ ಹೇಳಿ ಈಗ ಭೂಮಿಗೆ ಮರಳಿದ್ದಾರೆ.
ಮಂಗಳವಾರ ರಾತ್ರಿ ಐಎಸ್‌ಎಸ್‌ನಿಂದ ಡ್ರ್ಯಾಗನ್ ಪಯಣ ಆರಂಭಿಸಿತ್ತು. ತಾಸಿಗೆ ಸುಮಾರು 27 ಸಾವಿರ ಕಿ.ಮೀ. ವೇಗದಲ್ಲಿ ಕೋಶವು ಭೂಮಿಯತ್ತ ನುಗ್ಗಿತ್ತು. ಬಳಿಕ ನಾಲ್ಕು ಪ್ಯಾರಚೂಟ್‌ಗಳನ್ನು ಬಳಸಿ ಕೋಶದ ವೇಗವನ್ನು ನಿಯಂತ್ರಿಸಲಾಯಿತು. ಸಾಗರದ ನೀರಿನ ಮೇಲೆ ಬಂದಿಳಿದ ಕೋಶವನ್ನು ಡಾಲ್ಫಿನ್‌ಗಳು ಕೌತುಕದಿಂದ ಸುತ್ತುವರಿದವು. ಗಗನಯಾನಿಗಳನ್ನು ಡಾಲ್ಫಿನ್‌ಗಳು ಭೂಮಿಗೆ ಸ್ವಾಗತಿಸಿದಂತೆ ಇದು ಭಾಸವಾಯಿತು.
ರಕ್ಷಣಾ ತಂಡಗಳ ಸದಸ್ಯರು ಕೋಶವನ್ನು ಪರಿಶೀಲನೆಗೆ ಒಳಪಡಿಸಿದರು. ಕೋಶವನ್ನು ಹಡಗಿಗೆ ವರ್ಗಾಯಿಸಿದ ಬಳಿಕ ಬಾಗಿಲುಗಳನ್ನು ತೆರೆಯಲಾಯಿತು. ಗಗನಯಾನಿಗಳನ್ನು ಕೋಶದಿಂದ ಎತ್ತಿ ಹೊರಗೆ ತರಲಾಯಿತು. ತಿಂಗಳುಗಳಿಂದ ಭಾರರಹಿತ ಸ್ಥಿತಿಯಲ್ಲಿದ್ದ ಅವರ ದೇಹಗಳು, ಭೂಮಿಯ ಗುರುತ್ವಾಕರ್ಷಣ ಬಲಕ್ಕೆ ಹೊಂದಿಕೊಳ್ಳಲು ಶ್ರಮಪಡುತ್ತಿದ್ದವು.
ಕೋಶದ ಕಮಾಂಡರ್ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅವರೂ ಸುನಿತಾ ಮತ್ತು ಬುಚ್ ಜೊತೆಯಲ್ಲಿದ್ದರು.
ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದರು ಎಂಬುದನ್ನು ಸುನಿತಾ ಮತ್ತು ಬುಚ್ ಅವರು ನಿರಾಕರಿಸಿದ್ದಾರೆ. ‘ಅದು ನಮ್ಮ ಕೆಲಸವಾಗಿತ್ತು. ಅದನ್ನು ಸಂಭ್ರಮದಿಂದಲೇ ಮಾಡಿದ್ದೇವೆ. ಕೆಲವೊಮ್ಮೆ ಪ್ರಯಾಸವಾಗಿದ್ದೂ ಇದೆ, ಅದರಲ್ಲಿ ಅನುಮಾನ ಇಲ್ಲ’ ಎಂದು ದಿ ನ್ಯೂಯಾರ್ಕ್ ಟೈಮ್ಸ್‌ಗೆ ಕಳೆದ ವಾರ ಐಎಸ್‌ಎಸ್‌ನಿಂದಲೇ ನೀಡಿದ್ದ ಸಂದರ್ಶನದಲ್ಲಿ ಬುಚ್ ಹೇಳಿದ್ದರು. ‘ನೀವು ಅಲ್ಲಿ ಸಿಲುಕಿಕೊಂಡಿದ್ದೀರಿ, ಅನಿವಾರ್ಯವಾಗಿ ಅಲ್ಲಿ ಉಳಿಯಬೇಕಾಗಿದೆ’ ಮುಂತಾದ ಎಲ್ಲ ಪ್ರಶ್ನೆಗಳಿಗೂ ಅವರು ‘ಇಲ್ಲವೇ ಇಲ್ಲ’ ಎಂಬ ಉತ್ತರವನ್ನೇ ಕೊಟ್ಟಿದ್ದರು.
ಸುನಿತಾ ಮತ್ತು ವಿಲ್ಮೋರ್ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿ ಒಟ್ಟು 286 ದಿನ ಕಳೆದಿದ್ದಾರೆ. ಈ ಅವಧಿಯಲ್ಲಿ ಅವರು ಭೂಮಿಯನ್ನು 4,576 ಬಾರಿ ಸುತ್ತುಹಾಕಿದ್ದಾರೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಅತಿಥಿಗಳಾಗಿ ತೆರಳಿದ್ದ ಈ ಇಬ್ಬರು ಬಹಳ ಬೇಗ ಅಲ್ಲಿನ ಸಿಬ್ಬಂದಿಯಂತೆ ಬದಲಾದರು. ಅಲ್ಲಿ ಪ್ರಯೋಗಗಳನ್ನು ನಡೆಸಿದರು, ಅಲ್ಲಿನ ಉಪಕರಣಗಳನ್ನು ಸರಿಪಡಿಸುವ ಕೆಲಸ ಮಾಡಿದರು, ಇಬ್ಬರೂ ಒಟ್ಟಾಗಿ ಬಾಹ್ಯಾಕಾಶ ನಡಿಗೆಯಲ್ಲಿ ಭಾಗಿಯಾದರು.
ಮಹಿಳಾ ಗಗನಯಾನಿಗಳ ಪೈಕಿ ಅತಿ ಹೆಚ್ಚಿನ ಅವಧಿಗೆ ಬಾಹ್ಯಾಕಾಶ ನಡಿಗೆಯಲ್ಲಿ ಭಾಗಿಯಾದ ಖ್ಯಾತಿ ಈಗ ಸುನಿತಾ ಅವರದ್ದಾಗಿದೆ. ಸುನಿತಾ ಅವರು ಅಲ್ಲಿಗೆ ತೆರಳಿದ ನಂತರ ನಿಲ್ದಾಣದ ಕಮಾಂಡರ್ ಆಗಿಯೂ ಕೆಲಸ ನಿರ್ವಹಿಸಿದರು.
ಸುನಿತಾ ಮತ್ತು ವಿಲ್ಮೋರ್ ಅವರ ಸುರಕ್ಷತೆಗಾಗಿ ಅಮೆರಿಕದ 21 ಹಿಂದೂ ದೇವಸ್ಥಾನಗಳಲ್ಲಿ ಪೂಜಾ ಕಾರ್ಯಕ್ರಮ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.