ADVERTISEMENT

ನಿಷೇಧಾಜ್ಞೆ ತೆರವು | ಸಹಜ ಸ್ಥಿತಿಯತ್ತ ನೇಪಾಳ: ಇಂದು ಸಂಪುಟ ರಚನೆ

ಪಿಟಿಐ
Published 13 ಸೆಪ್ಟೆಂಬರ್ 2025, 23:30 IST
Last Updated 13 ಸೆಪ್ಟೆಂಬರ್ 2025, 23:30 IST
ಸುಶೀಲಾ ಕಾರ್ಕಿ
ಸುಶೀಲಾ ಕಾರ್ಕಿ   

ಕಠ್ಮಂಡು: ನೇಪಾಳದ ರಾಜಧಾನಿಯಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಯ ತೀವ್ರತೆ ತಗ್ಗಿದೆ. ನಿಷೇಧಾಜ್ಞೆಯ ತೆರವಿನೊಂದಿಗೆ ಶನಿವಾರ ಜನಜೀವನ ಸಹಜ ಸ್ಥಿತಿಗೆ ತಲುಪಿದೆ.

ಇತ್ತ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಸುಶೀಲಾ ಕಾರ್ಕಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಧಾನಿ ಸುಶೀಲಾ ಕಾರ್ಕಿ ಅವರು ಭ್ರಷ್ಟಾಚಾರ ಮುಕ್ತ ಭವಿಷ್ಯಕ್ಕಾಗಿ ಒತ್ತಾಯಿಸಿದ್ದ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.

ಶನಿವಾರ ಬೆಳಿಗ್ಗೆ ವೇಳೆಗೆ ಎಲ್ಲ ಬೀದಿಗಳು ಶಾಂತ ಸ್ಥಿತಿಗೆ ಮರಳಿವೆ, ಮಾರುಕಟ್ಟೆಗಳು ಜನರಿಗೆ ತೆರೆದಿವೆ ಮತ್ತು ವಾಹನಗಳು ಎಂದಿನಂತೆ ರಸ್ತೆಯಲ್ಲಿ ಸಂಚರಿಸುತ್ತಿವೆ.

ADVERTISEMENT

ನೂತನ ಹಂಗಾಮಿ ಪ್ರಧಾನಿ ಆಗಿರುವ  ಸುಶೀಲಾ ಕಾರ್ಕಿ ಅವರು ಗೃಹ ಸಚಿವರು, ವಿದೇಶಾಂಗ ಹಾಗೂ ರಕ್ಷಣಾ ಸಚಿವರು ಸೇರಿದಂತೆ ಕೆಲವೇ  ಸಚಿವರನ್ನು ಒಳಗೊಂಡ ಸಂಪುಟವನ್ನು ಭಾನುವಾರ ರಚಿಸಲಿದ್ದಾರೆ ಎಂದು ಅಧ್ಯಕ್ಷರ ಕಚೇರಿಯ ಮೂಲಗಳು ತಿಳಿಸಿವೆ.

ಅಲ್ಲದೇ, ‘ಜೆನ್‌–ಝೀ’ ಪ್ರತಿಭಟನೆ ವೇಳೆ ಪ್ರಧಾನಿ ಕಚೇರಿಯ ಕಟ್ಟಡವೂ ಬೆಂಕಿಗೆ ಆಹುತಿಯಾಗಿರುವ ಕಾರಣ ಸಿಂಗದರ್ಬಾರ್‌  ಸಂಕೀರ್ಣದಲ್ಲಿ ಗೃಹ ಸಚಿವಾಲಯಕ್ಕಾಗಿ ನೂತನವಾಗಿ ನಿರ್ಮಿಸಿರುವ ಕಚೇರಿಯನ್ನೇ ಪ್ರಧಾನಿ ಕಚೇರಿಯನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ ಎಂದೂ ತಿಳಿದುಬಂದಿದೆ. 

ಮಾರ್ಚ್‌ 5ಕ್ಕೆ ಚುನಾವಣೆ:

ನೇಪಾಳದ ಮುಂದಿನ ಸಾರ್ವತ್ರಿಕ ಚುನಾವಣೆಯು 2026ರ ಮಾರ್ಚ್‌ 5ರಂದು ನಡೆಯಲಿದೆ ಎಂದು ಅಧ್ಯಕ್ಷ ರಾಮಚಂದ್ರ ಪೌದೆಲ್‌ ಅವರ ಕಚೇರಿಯು ಘೋಷಿಸಿದೆ. 

ಹಂಗಾಮಿ ಪ್ರಧಾನಿ ಸುಶೀಲಾ ಕಾರ್ಕಿ ಅವರ ಶಿಫಾರಸಿನ ಮೇರೆಗೆ ಶುಕ್ರವಾರ ತಡರಾತ್ರಿಯೇ ಸಂಸತ್ತನ್ನು ಅಧ್ಯಕ್ಷ ಪೌದೆಲ್‌ ವಿಸರ್ಜಿಸಿದ್ದರು.

ಕಠ್ಮಂಡುವಿನ ಡಾಬರ್ ಸ್ಕ್ವೇರ್‌ನಲ್ಲಿ  ಆಟೊರಿಕ್ಷಾ ಚಾಲಕರೊಬ್ಬರು ಶನಿವಾರ ಮೊಬೈಲ್‌ನಲ್ಲಿ ತಲ್ಲೀನನಾಗಿದ್ದರು  

ಇದಕ್ಕೆ ಸಂಬಂಧಿಸಿದಂತೆ ಅಧ್ಯಕ್ಷರ ಕಚೇರಿಯು ಪ್ರಕಟಣೆ ಹೊರಡಿಸಿದೆ. ‘ 2025ರ ಸೆಪ್ಟೆಂಬರ್‌ 12ರ ರಾತ್ರಿ 11 ರಿಂದ ಅನ್ವಯವಾಗುವಂತೆ ಸಂಸತ್‌ ಅನ್ನು ವಿಸರ್ಜಿಸಲಾಗುತ್ತಿದ್ದು, 2026ರ ಮಾರ್ಚ್‌ 5ಕ್ಕೆ ಸಾರ್ವತ್ರಿಕ ಚುನಾವಣೆಯನ್ನು ನಿಗದಿ ಪಡಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ. 

 ‘ಸಂಸತ್‌ ವಿಸರ್ಜನೆ ಅಸಂವಿಧಾನಿಕ: ರಾತ್ರೋರಾತ್ರಿ ಸಂಸತ್ತನ್ನು ವಿಸರ್ಜಿಸಿರುವ ನೇಪಾಳದ ಅಧ್ಯಕ್ಷರ ತೀರ್ಮಾನವನ್ನು ಇಲ್ಲಿನ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ವಕೀಲರ ಸಂಘಟನೆಗಳು ಖಂಡಿಸಿದ್ದು, ಇದು ಅಸಂವಿಧಾನಿಕ ನಡೆ ಹಾಗೂ ನಿರಂಕುಶಾಧಿಕಾರದ ಪ್ರತೀಕ ಎಂದು ಆರೋಪಿಸಿವೆ. 

ಕಠ್ಮಂಡುವಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿಗೀಡಾದವರ ಸ್ಮರಣಾರ್ಥ ಜನರು ಶನಿವಾರ ಮೇಣದ ಬತ್ತಿ ಬೆಳಗಿಸಿದರು.   

140 ಕೋಟಿ ಭಾರತೀಯರ ಪರವಾಗಿ ನೂತನ ಪ್ರಧಾನಿ ಸುಶೀಲಾ ಕಾರ್ಕಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾರ್ಕಿ ಅವರ ನೇತೃತ್ವದಲ್ಲಿ ನೇಪಾಳವು ಶಾಂತಿ ಸ್ಥಿರತೆ ಸಮೃದ್ಧತೆಯನ್ನು ಮರಳಿ ಪಡೆಯುತ್ತದೆ ಎಂಬ ವಿಶ್ವಾಸವಿದೆ
ನರೇಂದ್ರ ಮೋದಿ ಪ್ರಧಾನಿ
‘ಸುಪ್ರೀಂ’  ಮಹತ್ವದ ದಾಖಲೆಗಳು ನಾಶ
ವಿದ್ಯಾರ್ಥಿಗಳ ನೇತೃತ್ವದ ಸರ್ಕಾರ ವಿರೋಧಿ ಪ್ರತಿಭಟನೆಯ ವೇಳೆ ಮಹತ್ವದ ನ್ಯಾಯಾಂಗ ದಾಖಲೆಗಳು ನಾಶವಾಗಿವೆ ಎಂದು ನೇಪಾಳದ ಸುಪ್ರೀಂ ಕೋರ್ಟ್‌ ತಿಳಿಸಿದೆ. ಎಂಥದ್ದೇ ಸಂದರ್ಭದಲ್ಲಿಯೂ ನ್ಯಾಯದ ಹಾದಿಯಲ್ಲಿ ಸ್ಥಿರ ಮತ್ತು ದೃಢನಿಶ್ಚಯದಿಂದ ನಿಲ್ಲುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಕಾಶ್ಮನ್‌ ಸಿಂಗ್‌ ರಾವುತ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾಗರಿಕರ ಸಮಸ್ಯೆ ಆಲಿಸಲು ಆದಷ್ಟು ಶೀಘ್ರವಾಗಿ ನ್ಯಾಯಾಂಗ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ವಾರಾಣಸಿ ಜೊತೆ ಕಾರ್ಕಿ ಅವಿನಾಭಾವ ನಂಟು

ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿರುವ ಸುಶೀಲಾ ಕಾರ್ಕಿ (73) ಅವರು ವಾರಾಣಸಿಯೊಂದಿಗೆ ಅವಿನಾಭಾವ ನಂಟನ್ನು ಹೊಂದಿದ್ದಾರೆ. ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ  ಅವರು ‘ಭಾರತದ ಸ್ನೇಹಿತೆ’ ಎಂದು ತಮ್ಮನ್ನು ಕರೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಪ್ರತಿಷ್ಠಿತ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಮತ್ತು ಇದೇ ವೇಳೆ ತಮ್ಮ ಜೀವನ ಸಂಗಾತಿಯನ್ನು ಭೇಟಿ ಮಾಡಿದ್ದಾಗಿ ತಿಳಿಸಿದ್ದಾರೆ. ‘ಕಾರ್ಕಿ ಅವರು 1975ರಲ್ಲಿ ಬಿಎಚ್‌ಯುನಲ್ಲಿ ರಾಜಕೀಯಶಾಸ್ತ್ರ  ಎಂ.ಎ ವ್ಯಾಸಂಗ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ನೇಪಾಳದ ರಾಜಪ್ರಭುತ್ವ ವಿರೋಧಿ ಪ್ರತಿಭಟನೆಗೆ ವಾರಾಣಸಿ ಕೇಂದ್ರವಾಗಿತ್ತು. ಕಾರ್ಕಿ ಅವರು  ಈ ಚಳವಳಿಯಲ್ಲಿ ಭಾಗಿಯಾಗಿದ್ದರು’ ಎಂದು ಬಿಎಚ್‌ಯುನ ನಿವೃತ್ತ ಪ್ರಾಧ್ಯಾಪಕ ದೀಪಕ್‌ ಮಲ್ಲಿಕ್‌ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.