ADVERTISEMENT

ಸಂಭವನೀಯ ಹಿಂಸಾಚಾರ ತಡೆಗೆ ಕ್ರಮ: ನೇಪಾಳದಾದ್ಯಂತ ಕರ್ಫ್ಯೂ ವಿಧಿಸಿದ ಸೇನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:38 IST
Last Updated 10 ಸೆಪ್ಟೆಂಬರ್ 2025, 7:38 IST
<div class="paragraphs"><p>ನೇಪಾಳದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ.</p></div>

ನೇಪಾಳದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ.

   

–ಪಿಟಿಐ ಚಿತ್ರ

ಕಠ್ಮಂಡು: ಸಂಭವನೀಯ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ನೇಪಾಳ ಸೇನೆಯು ದೇಶದಾದ್ಯಂತ ಕರ್ಫ್ಯೂ ವಿಧಿಸಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಪ್ರತಿಭಟನೆಯ ನೆಪದಲ್ಲಿ ಸಂಭವನೀಯ ಹಿಂಸಾಚಾರವನ್ನು ಹತ್ತಿಕ್ಕಲು ನೇಪಾಳ ಸೇನೆ ಬುಧವಾರ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಿದೆ. ಅದರಂತೆ ಬುಧವಾರ ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬಳಿಕ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಕರ್ಫ್ಯೂ ಜಾರಿಗೆ ಬರಲಿದೆ’ ಎಂದು ಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ.

ನೇಪಾಳದ ರಾಜಧಾನಿ ಕಠ್ಮಂಡು ಸೇರಿದಂತೆ ಪ್ರಮುಖ ನಗರಗಳಿಗೆ ಸೇನಾ ಪಡೆಗಳು ಜಮಾಯಿಸಿದ್ದು, ಪ್ರತಿಭಟನಕಾರರ ಮೇಲೆ ತೀವ್ರ ನಿಗಾವಹಿಸಿವೆ ಎಂದು ಮೂಲಗಳು ತಿಳಿಸಿವೆ.

ನೇಪಾಳ ಸೇನೆಯು ಮಂಗಳವಾರ ರಾತ್ರಿ 10ರಿಂದ ಭದ್ರತಾ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡಿದ್ದು, ನಿರ್ಬಂಧಿತ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರತಿಭಟನೆಗಳು, ವಿಧ್ವಂಸಕ ಕೃತ್ಯಗಳು, ಬೆಂಕಿ ಹಚ್ಚುವುದು, ವ್ಯಕ್ತಿಗಳು ಅಥವಾ ಆಸ್ತಿಯ ಮೇಲೆ ದಾಳಿ ನಡೆಸುವುದನ್ನು ಕ್ರಿಮಿನಲ್ ಕೃತ್ಯಗಳೆಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ದೇಶದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕರ್ಫ್ಯೂ ಜಾರಿಗೊಳಿಸಲಾಗಿದೆ. ಕರ್ಫ್ಯೂ ಸಮಯದಲ್ಲಿ ಆಂಬುಲೆನ್ಸ್‌ಗಳು, ಅಗ್ನಿಶಾಮಕ ವಾಹನಗಳು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆಗಳಲ್ಲಿ ತೊಡಗಿರುವ ವಾಹನಗಳು ಮತ್ತು ಸಿಬ್ಬಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.

ನೇಪಾಳ ರಾಜಧಾನಿ ಕಠ್ಮಂಡು ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಬುಧವಾರವೂ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ಕ್ರಮ ವಿರೋಧಿಸಿ ಹಾಗೂ ಭ್ರಷ್ಟಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

‘ಪೊಲೀಸರು ಕೈಗೊಂಡ ಕ್ರಮದಿಂದಾಗಿ ಸೋಮವಾರ 19 ಪ್ರತಿಭಟನಕಾರರು ಮೃತಪಟ್ಟ ಕಾರಣಕ್ಕೆ ಓಲಿ ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಸಾವಿರಾರು ಪ್ರತಿಭಟನಕಾರರು ಅವರ ನಿವಾಸಕ್ಕೆ ನುಗ್ಗಿ, ಘೋಷಣೆಗಳನ್ನೂ ಹಾಕಿದರು. ಇದಾದ ಸ್ವಲ್ಪ ಹೊತ್ತಿನ ಬಳಿಕ ಓಲಿ ಅವರು ತಮ್ಮ ರಾಜೀನಾಮೆ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.