ADVERTISEMENT

Nepal Unrest: ಕಠ್ಮಂಡು ವಿಮಾನ ನಿಲ್ದಾಣ ವಶಕ್ಕೆ ಪಡೆದ ನೇಪಾಳ ಸೇನೆ

ಪಿಟಿಐ
Published 10 ಸೆಪ್ಟೆಂಬರ್ 2025, 5:12 IST
Last Updated 10 ಸೆಪ್ಟೆಂಬರ್ 2025, 5:12 IST
<div class="paragraphs"><p>ನೇಪಾಳದ ಸೇನಾಪಡೆ</p></div>

ನೇಪಾಳದ ಸೇನಾಪಡೆ

   

–ಪಿಟಿಐ ಚಿತ್ರ

ಕಠ್ಮಂಡು: ನೇಪಾಳದಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೇನೆ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ADVERTISEMENT

ನೇಪಾಳ ರಾಜಧಾನಿ ಕಠ್ಮಂಡು ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಬುಧವಾರವೂ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ ಮತ್ತು ಕಠ್ಮಂಡು ನಡುವೆ ಪ್ರತಿದಿನ ಆರು ವಿಮಾನಗಳನ್ನು ನಿರ್ವಹಿಸುವ ಏರ್ ಇಂಡಿಯಾ ನಾಲ್ಕು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಇಂಡಿಗೊ ಮತ್ತು ನೇಪಾಳ ಏರ್‌ಲೈನ್ಸ್‌ ಸಂಸ್ಥೆಗಳು ಕೂಡ ವಿಮಾನ ಹಾರಾಟವನ್ನು ರದ್ದುಗೊಳಿಸಿವೆ.

ಪ್ರತಿಭಟನಕಾರರು ರಾಜಕೀಯ ನಾಯಕರ ಮನೆಗಳನ್ನು ಸುಟ್ಟುಹಾಕಿದ ಬೆನ್ನಲ್ಲೇ ಸೇನೆಯು ಸರ್ಕಾರದ ಮುಖ್ಯ ಸಚಿವಾಲಯ ಕಟ್ಟಡವಾದ ‘ಸಿಂಘ ದರ್ಬಾರ್’ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಜತೆಗೆ, ಪ್ರತಿಭಟನಕಾರರು ಪವಿತ್ರ ಪಶುಪತಿನಾಥ ದೇವಾಲಯದ ದ್ವಾರವನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದ ವೇಳೆ ಸೇನೆ ಮಧ್ಯಪ್ರವೇಶ ಮಾಡಿದೆ.

ಮಂಗಳವಾರ ರಾತ್ರಿ 10ಗಂಟೆಯಿಂದ ಭದ್ರತಾ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಳ್ಳುವುದಾಗಿ ನೇಪಾಳ ಸೇನೆ ಈ ಹಿಂದೆ ಘೋಷಿಸಿತ್ತು.

ದೇಶದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ಕ್ರಮ ವಿರೋಧಿಸಿ ಹಾಗೂ ಭ್ರಷ್ಟಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದ ಬೆನ್ನಲ್ಲೇ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

‘ಪೊಲೀಸರು ಕೈಗೊಂಡ ಕ್ರಮದಿಂದಾಗಿ ಸೋಮವಾರ 19 ಪ್ರತಿಭಟನಕಾರರು ಮೃತಪಟ್ಟ ಕಾರಣಕ್ಕೆ ಓಲಿ ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿ ಸಾವಿರಾರು ಪ್ರತಿಭಟನಕಾರರು ಅವರ ನಿವಾಸಕ್ಕೆ ನುಗ್ಗಿ, ಘೋಷಣೆಗಳನ್ನೂ ಹಾಕಿದರು. ಇದಾದ ಸ್ವಲ್ಪ ಹೊತ್ತಿನ ಬಳಿಕ ಓಲಿ ಅವರು ತಮ್ಮ ರಾಜೀನಾಮೆ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.