ಕಠ್ಮಂಡು: ನೇಪಾಳದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಕಿ (73) ಅವರು ನೂತನ ಪ್ರಧಾನಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
‘ಜೆನ್–ಝಿ’ ಪ್ರತಿಭಟನೆಯಿಂದಾಗಿ ಈ ವಾರದ ಆರಂಭದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ದಿಢೀರ್ ರಾಜೀನಾಮೆಯ ನಂತರ ನೇಪಾಳದಲ್ಲಿ ತಲೆತೋರಿದ್ದ ರಾಜಕೀಯ ಅನಿಶ್ಚಿತತೆಗೆ ಇದರೊಂದಿಗೆ ತೆರೆಬಿದ್ದಂತಾಗಿದೆ.
‘ಅಭಿನಂದನೆಗಳು... ನಿಮಗೆ ಹಾಗೂ ಈ ದೇಶಕ್ಕೆ ಯಶಸ್ಸನ್ನು ಬಯಸುತ್ತೇವೆ’ ಎಂದು ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಕಿ ಅವರಿಗೆ ಅಧ್ಯಕ್ಷ ರಾಮಚಂದ್ರ ಪೌದೆಲ್ ಶುಭ ಹಾರೈಸಿದ್ದಾರೆ.
ಪೌದೆಲ್ ಅಲ್ಲದೆ ಉಪಾಧ್ಯಕ್ಷ ರಾಮ ಸಹಾಯ್ ಯಾದವ್, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಮಾನ್ ಸಿಂಗ್ ರಾವತ್ ಅವರು ಶುಕ್ರವಾರ ರಾತ್ರಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಇದ್ದರು.
ಸಂಸತ್ತು ವಿಸರ್ಜನೆ: ನೇಪಾಳ ಸಂಸತ್ತನ್ನು ಶುಕ್ರವಾರ ತಡರಾತ್ರಿ ವಿಸರ್ಜಿಸಲಾಯಿತು. ‘ಪ್ರಧಾನ ಮಂತ್ರಿಯ ಶಿಫಾರಸಿನ ಮೇರೆಗೆ ಸಂಸತ್ತನ್ನು ವಿಸರ್ಜಿಸಲಾಗಿದೆ. 2026ರ ಮಾರ್ಚ್ 5ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ’ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
ಸಹಜಸ್ಥಿತಿಯತ್ತ ರಾಜಧಾನಿ:
ನಿರ್ಬಂಧಗಳನ್ನು ಸಡಿಲಗೊಳಿಸಿದ ಬೆನ್ನಲ್ಲೇ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳು ನಿಧಾನವಾಗಿ ಪುನರಾರಂಭಗೊಂ ಡಿವೆ. ಇದರೊಂದಿಗೆ ಕಣಿವೆ ಪ್ರದೇಶದ ಪೊಲೀಸರು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಇಲ್ಲಿನ ಸುಪ್ರೀಂಕೋರ್ಟ್ ಮತ್ತು ಬ್ಯಾಂಕ್‌ಗಳು ಕಾರ್ಯಾರಂಭಿಸಲು ಸಿದ್ಧವಾಗಿವೆ. ಸರ್ಕಾರದ ವಿರುದ್ಧದ ಪ್ರತಿಭಟನೆ ವೇಳೆ ಸಂಸತ್ ಕಟ್ಟಡ ಸೇರಿದಂತೆ ಪ್ರಮುಖ ಕಟ್ಟಡಗಳು, ಹತ್ತಾರು ಪೊಲೀಸ್ ಠಾಣೆಗಳು, ಚೆಕ್‌ಪೋಸ್ಟ್‌ಗಳ ಮೇಲೆ ಪ್ರತಿಭಟನ ಕಾರರು ದಾಳಿ ಮಾಡಿ ಹಾನಿ ಗೊಳಿಸಿದ್ದರು. ಅದರಲ್ಲೂ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಬ್ಯಾಂಕ್ ಕಚೇರಿಗಳು ಪೂರ್ಣಪ್ರಮಾಣದಲ್ಲಿ ಹಾನಿಗೊಳಗಾಗಿದೆ.
‘ನ್ಯಾಯಾಲಯ ಕಲಾಪವನ್ನು ಮತ್ತೆ ಆರಂಭಿಸುವ ನಿರ್ಧಾರವನ್ನು ತುರ್ತು ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಮಾನ್ ಸಿಂಗ್ ಹೇಳಿದ್ದಾರೆ. ‘ನ್ಯಾಯಾಲಯದ ಪ್ರಮುಖ ದಾಖಲೆಗಳಿಗೆ ಶಾಶ್ವತ ಹಾನಿಯಾಗಿದೆ’ ಎಂದು ತಿಳಿಸಿದ್ದಾರೆ.
‘ಪೊಲೀಸ್ ಠಾಣೆ ಮತ್ತು ಚೆಕ್‌ಪೋಸ್ಟ್‌ಗಳು ಮತ್ತೆ ಕಾರ್ಯಾಚರಣೆ ಆರಂಭಿಸಿವೆ. ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿ ಚೆಕ್‌ಪೋಸ್ಟ್ ಮತ್ತು ರಸ್ತೆಗಳಲ್ಲಿ ಗಸ್ತು ನಡೆಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಉಳಿದಿರುವ ಮೂಲಸೌಕರ್ಯಗಳನ್ನು ಬಳಸಿ ಕೊಂಡು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ಪೊಲೀಸ್ ಇಲಾಖೆಯ ವಕ್ತಾರ ಎಸ್‌ಎಸ್‌ಪಿ ಶೇಖರ್ ಖನಾಲ್ ಅವರು ತಿಳಿಸಿದ್ದಾರೆ.
ಭಾರತದ ಮಹಿಳೆ ಸೇರಿ 51 ಸಾವು
ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಒಬ್ಬ ಭಾರತದ ಮಹಿಳೆ ಸೇರಿದಂತೆ ಒಟ್ಟು 51 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ ಪರಿಣಾಮ 19 ಮಂದಿ
ಮೃತಪಟ್ಟಿದ್ದಾರೆ. ಅವರು ವಿದ್ಯಾರ್ಥಿಗಳು ಎನ್ನಲಾಗುತ್ತಿದೆ.
‘ಸುಮಾರು 1,700 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 1,000 ಜನರು ಚಿಕಿತ್ಸೆ ಪಡೆದು ತಮ್ಮ ಮನೆಗೆ ಮರಳಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮಖ ಅಂಶಗಳು
ಹಿಂಸಾಚಾರ ಹಿನ್ನೆಲೆಯಲ್ಲಿ ಪ್ರತಿಬಂಧಕಾಜ್ಞೆ ಜಾರಿ ನಂತರ ದೇಶದಲ್ಲಿ ಸಿಲುಕಿರುವ ವಿದೇಶಿ ನಾಗರಿಕರು ತಮ್ಮ ರಾಷ್ಟ್ರಗಳಿಗೆ ವಾಪಸಾಗಲು ಅನುವಾಗುವಂತೆ ನೇಪಾಳ ಸರ್ಕಾರ ತಾತ್ಕಾಲಿಕ ಕ್ರಮಗಳನ್ನು ಕೈಗೊಂಡಿದೆ. ವೀಸಾ ಮತ್ತಿತರ ನಿಯಮಗಳನ್ನು ಸಡಿಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
‘ಜೆನ್–ಝಿ’ ಪ್ರತಿಭಟನೆಯಿಂದಾಗಿ ನೇಪಾಳದ ಹೋಟೆಲ್ ಉದ್ಯಮಕ್ಕೆ 25 ಶತಕೋಟಿ ರೂಪಾಯಿಯಷ್ಟು ನಷ್ಟ ಉಂಟಾಗಿದೆ ಎಂದು ಹೋಟೆಲ್ ಅಸೋಸಿಯೇಷನ್ ನೇಪಾಳ (ಎಚ್‌ಎಎನ್) ಹೇಳಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.