
ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಉತ್ತರ ದ್ವೀಪದ ಪ್ರಮುಖ ಪಟ್ಟಣ ಆಕ್ಲೆಂಡ್‌ನಲ್ಲಿ ಬಾನೆತ್ತರಕ್ಕೆ ಚಿಮ್ಮಿದ ಪಟಾಕಿಯ ಬೆಳಕಿನ ಚಿತ್ತಾರದೊಂದಿಗೆ ಹೊಸವರ್ಷದ ಸಂಭ್ರಮಾಚರಣೆಗೆ ವಿಶ್ವವು ಮುನ್ನುಡಿ ಬರೆಯಿತು.
240 ಮೀಟರ್ ಎತ್ತರದ ಪ್ರಖ್ಯಾತ ಸ್ಕೈ ಟವರ್‌ನ ವಿವಿಧ ಮಹಡಿಗಳಿಂದ 3,500ಕ್ಕೂ ಅಧಿಕ ಪಟಾಕಿಗಳನ್ನು ಸಿಡಿಸಿ, ಜನರು 2026ನೇ ವರ್ಷವನ್ನು ಬರಮಾಡಿಕೊಂಡರು.
ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್‌ನಲ್ಲಿ ಬಾಲ್ ಡ್ರಾಪ್ ಮೂಲಕ ಹೊಸವರ್ಷದ ಶುಭಾರಂಭ ಮಾಡುವ 18 ಗಂಟೆಗೂ ಮುಂಚೆಯೇ ಆಕ್ಲೆಂಡ್‌ನಲ್ಲಿ ಹರ್ಷೋದ್ಘಾರದೊಂದಿಗೆ ಆಚರಣೆ ಶುರುವಾಯಿತು.
ನ್ಯೂಜಿಲೆಂಡ್‌ನ ಸಂಭ್ರಮದ 2 ಗಂಟೆಯ ಬಳಿಕ ಆಸ್ಟ್ರೇಲಿಯಾದಲ್ಲೂ ಪಟಾಕಿಗಳ ಚಿತ್ತಾರದೊಂದಿಗೆ ಆಚರಣೆ ಆರಂಭಗೊಂಡಿದೆ. ಆದರೆ, ಇತ್ತೀಚೆಗಷ್ಟೇ ಭಯೋತ್ಪಾದಕ ದಾಳಿ ನಡೆದಿದ್ದ ಕಾರಣ ವಿಶ್ವದ ಹೊಸ ವರ್ಷಾಚರಣೆಯ ರಾಜಧಾನಿ ಎನಿಸಿಕೊಂಡಿದ್ದ ಸಿಡ್ನಿಯಲ್ಲಿ ಪೊಲೀಸರ ಬಿಗಿ ಬಂದೋಬಸ್ತ್‌ನೊಂದಿಗೇ ಹೊಸ ವರ್ಷವನ್ನು ಸ್ವಾಗತಿಸಲಾಗಿದೆ.
ಇಂಡೋನೇಷ್ಯಾ ಹಾಗೂ ಹಾಂಗ್‌ಕಾಂಗ್‌ನಲ್ಲಿ ಪ್ರಾಕೃತಿಕ ವಿಕೋಪ ಹಾಗೂ ಇನ್ನಿತರ ದುರಂತಗಳಿಂದ ತೊಂದರೆಗೀಡಾದ ಜನರಿಗಾಗಿ ಪ್ರಾರ್ಥನೆ ಸಲ್ಲಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆದಿದೆ.
ಒಟ್ಟಾರೆ, ಟ್ರಂಪ್ ಪ್ರತಿಸುಂಕ ನೀತಿ, ಗಾಜಾದ ಶಾಂತಿ ಒಪ್ಪಂದದಂಥ ಪ್ರಮುಖ ಬೆಳವಣಿಗೆಗೆ ಸಾಕ್ಷಿಯಾಗಿದ್ದ 2025ಕ್ಕೆ ಬೀಳ್ಕೊಡುಗೆ ನೀಡಿ, ಉಕ್ರೇನ್‌ನಲ್ಲಿ ಶಾಂತಿ ಸ್ಥಾಪನೆಯಾಗುವ ಭರವಸೆಯೊಂದಿಗೆ 2026ಕ್ಕೆ ಜನರು ಸ್ವಾಗತ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.