
ರಮಾ ದುವಾಜಿ
ಚಿತ್ರಕೃಪೆ: ಗೆಟ್ಟಿ
ಅಮೆರಿಕದ ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದ ಜೊಹ್ರಾನ್ ಮಮ್ದಾನಿ, ತಮ್ಮ ವ್ಯಕ್ತಿತ್ವ, ವಾಕ್ಚಾತುರ್ಯದ ಕಾರಣಕ್ಕೆ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕುರಾನ್ ಪ್ರತಿ ಮೇಲೆ ಕೈಯಿಟ್ಟು ಪ್ರಮಾಣ ಮಾಡಿರುವುದು ಮಮ್ದಾನಿ ಬಗ್ಗೆ ಮತ್ತಷ್ಟು ಚರ್ಚೆ ಹುಟ್ಟುಹಾಕಲು ಕಾರಣವಾಯಿತು. ಈ ನಡುವೆ ಎಲ್ಲರ ಗಮನ ಸೆಳೆದದ್ದು ಮಮ್ದಾನಿ ಪಕ್ಕದಲ್ಲಿ ಕುರಾನ್ ಪ್ರತಿ ಹಿಡಿದುಕೊಂಡು ನಿಂತಿದ್ದ ಸುಂದರಿ, ಜೊಹ್ರಾನ್ ಮಮ್ದಾನಿ ಪತ್ನಿ ರಮಾ ದುವಾಜಿ.
ಯಾರೀಕೆ ರಮಾ ದುವಾಜಿ?
ಸಿರಿಯಾ ಮೂಲದವರಾದ ರಮಾ ದುವಾಜಿ, ವರ್ಜಿನಿಯಾ ಕಾಮನ್‌ವೆಲ್ತ್ ವಿಶ್ವವಿದ್ಯಾಲಯದಿಂದ ಲಲಿತಕಲೆ ವಿಷಯದಲ್ಲಿ ಪದವಿ ಪಡೆದವರು. ಇಲಸ್ಟ್ರೇಷನ್ ಚಿತ್ರ ಕಲಾವಿದೆ, ಚಳವಳಿಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕುಟುಂಬದೊಂದಿಗೆ ದುಬೈನಲ್ಲಿ ನೆಲೆಸಿದ್ದ ರಮಾ, ನಂತರದಲ್ಲಿ ಅಮೆರಿಕದ ಬ್ರೂಕ್ಲಿನ್‌ಗೆ ಬಂದು ಚಿತ್ರ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ, ಪರಿಣಾಮಕಾರಿ ಇಲಸ್ಟ್ರೇಷನ್ ಮೂಲಕ ಗುರುತಿಸಿಕೊಂಡಿರುವ ರಮಾ ಅವರ ಚಿತ್ರಗಳನ್ನು, ವಾಷಿಂಗ್ಟನ್ ಪೋಸ್ಟ್, ಬಿಬಿಸಿ, ಆ್ಯಪಲ್, ಸ್ಪೋಟಿಫೈ, ವೈಸ್ ಹಾಗೂ ಟೇಟ್ ಮಾಡರ್ನ್ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ.
'ನನ್ನ ಚಿತ್ರಗಳು ಅದು ಒಳಗೊಳ್ಳುವ ಸಂವೇದನೆಯ ಕಾರಣಕ್ಕೆ ಜನರನ್ನು ಚಿಂತನೆಗೆ ಹಚ್ಚಿದರೆ ಅದೊಂದು ರೀತಿ, ಚಿತ್ರರಚನೆಯ ಉದ್ದೇಶದಾಚೆಗೆ ಸಿಗುವ ಬೋನಸ್ ಇದ್ದ ಹಾಗೆ' ಎಂದು ಸಂದರ್ಶನವೊಂದರಲ್ಲಿ ರಮಾ ಹೇಳಿದ್ದಾರೆ.
ಮಮ್ದಾನಿ- ರಮಾ ಒಂದಾಗಿಸಿದ 'ಹಿಂಜ್':
ರಮಾ ಹಾಗೂ ಜೊಹ್ರಾನ್ ಮಮ್ದಾನಿ ಅವರ ಪ್ರೇಮಕಥೆ ಸಹಜವಾದ ಸೆಲೆಬ್ರಿಟಿಗಳ ಪ್ರೇಮಕಥೆಗಳಂತಲ್ಲ. ಮಮ್ದಾನಿ ಅವರೇ ಹೇಳಿದಂತೆ, ಅವರಿಗೆ ರಮಾ ಪರಿಚಯ ಆಗಿದ್ದು 'ಹಿಂಜ್' ಎನ್ನುವ ಅಮೆರಿಕ ಮೂಲದ ಡೇಟಿಂಗ್ ಆ್ಯಪ್ ನಲ್ಲಿ. ಬಹುತೇಕ ತಮ್ಮ ಸಂಬಂಧವನ್ನು ರಹಸ್ಯವಾಗಿಯೇ ಇಟ್ಟಿದ್ದ ಮಮ್ದಾನಿ- ರಮಾ ಪರಸ್ಪರ ಪ್ರೀತಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದ್ದು 2022ರ ಏಪ್ರಿಲ್ ನಲ್ಲಿ ಮಮ್ದಾನಿ ಅವರು ರಮಾ ಕ್ಲಿಕ್ಕಿಸಿದ ಫೋಟೊ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಾಗ. ಆದರೂ ಹೆಚ್ಚು ಮಾಹಿತಿಯೇನೂ ಲಭ್ಯವಾಗಿರಲಿಲ್ಲ. ನಂತರ 2024ರಲ್ಲಿ ನಿಶ್ಚಿತಾರ್ಥದ ಸಂದರ್ಭದಲ್ಲಿ ಮತ್ತಷ್ಟು ಸುದ್ದಿಯಾಯಿತು. ಈ ಬಗ್ಗೆ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಹಂಚಿಕೊಂಡಿದ್ದರು.
2025ರ ಆರಂಭದಲ್ಲಿ, ನ್ಯೂಯಾರ್ಕ್ ಮೇಯರ್ ಚುನಾವಣೆ ಸಂದರ್ಭಕ್ಕಿಂತ ಕೆಲ ತಿಂಗಳ ಮುನ್ನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ನಂತರದಿಂದ ಮಮ್ದಾನಿ ಅವರ ಅಭೂತಪೂರ್ವ ಗೆಲುವಿನ ಕಾರಣಕ್ಕೆ ನಿರಂತರ ಸುದ್ದಿಯಲ್ಲಿದ್ದಾರೆ. ಸದ್ಯ ಪ್ರಮಾಣ ವಚನ ಸಂದರ್ಭದಲ್ಲಿ ರಮಾ ಧರಿಸಿದ ಉಡುಗೆ, ಬೂಟು ಕೂಡಾ ಚರ್ಚೆಯ ವಿಷಯವಾಗಿದೆ.
ವಿವಾಹ ಪೂರ್ವ, ಜೊಹ್ರಾನ್ ಮಮ್ದಾನಿ ಅವರು ರಮಾ ಕುರಿತು ಆಡಿದ ಮಾತಿನ ಬಗ್ಗೆ ಕುತೂಹಲಕರ ಸಂಗತಿಯೊಂದನ್ನು ಛಾಯಾಗ್ರಾಹಕ ಕಾರಾ ಮೆಕ್ ಕರ್ಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ. 'ಕೆಲ ವರ್ಷಗಳ ಹಿಂದೆ, ಮಮ್ದಾನಿ ಅವರೊಂದಿಗೆ ಪ್ರಯಾಣಕ್ಕೆ ಹೊರಟಿದ್ದೆ, ಆ ಸಂದರ್ಭದಲ್ಲಿ ಮಮ್ದಾನಿ ಅವರು ರಮಾ ಅವರನ್ನು ಉದ್ದೇಶಿಸಿ, 'ನಾನು ಇವರನ್ನು ಮದುವೆಯಾಗಬೇಕು ಅಂದುಕೊಂಡಿದ್ದೇನೆ' ಎಂದು ಹೇಳಿದ್ದರು. ಅವರು ಯೋಚಿಸಿಯೇ ಆ ಮಾತು ಹೇಳಿದ್ದರು ಎಂದು ಆಗಲೇ ಅನಿಸಿತ್ತು' ಎಂದು ಕಾರಾ ಬರೆದುಕೊಂಡಿದ್ದಾರೆ.
ಚರ್ಚೆಯಾದ ರಮಾ ಕೋಟು, ಬೂಟು:
ಮಮ್ದಾನಿ ಅವರ ಪ್ರಮಾಣವಚನದ ಸಂದರ್ಭದಲ್ಲಿ ರಮಾ ಧರಿಸಿದ್ದ ಉದ್ದ ಕಾಲರಿನ ಚಾಕೊಲೇಟ್ ಬಣ್ಣದ ಕೋಟು, ಅದು ಸಾರುವ ಸಂದೇಶದ ಕಾರಣಕ್ಕೆ ಸುದ್ದಿಯಾದರೆ, ಅವರು ಧರಿಸಿದ್ದ ಬೂಟು, ಅದರ ಮೌಲ್ಯದ ಕಾರಣಕ್ಕೆ ಚರ್ಚೆಗೆ ಗ್ರಾಸವಾಯಿತು.
ಪ್ಯಾಲಸ್ಟೀನ್-ಲೆಬನೀಸ್ ಮೂಲದ ಡಿಸೈನರ್ ಸಿಂತಿಯಾ ಮರ್ಹೆಜ್, ಪ್ಯಾಲಸ್ಟೀನ್- ಜೋರ್ಡನ್ ಮೂಲದ ಡಿಸೈನರ್ ಝೈದ್ ಹಿಜಾಝಿ, ನ್ಯೂಯಾರ್ಕ್ ಮೂಲದ ಉಲ್ಲಾ ಜಾನ್ಸನ್, ಎಡ್ಡೀ ಬೋರ್ಗೊ ರಮಾ ಅವರ ಉಡುಗೆ ತೊಡುಗೆಗಳ ವಿನ್ಯಾಸ ಮಾಡಿದ್ದಾರೆ. ಮಧ್ಯಪ್ರಾಚ್ಯ ಮೂಲದ ವಿನ್ಯಾಸಗಾರರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಭಿನ್ನ ರೂಪದಲ್ಲಿ ಹೊಸ ಸಂದೇಶವನ್ನು ರಮಾ ಸಾರಿದ್ದಾರೆ ಎನ್ನುವುದು ಹಲವರ ಅಭಿಪ್ರಾಯ. ಉಡುಗೆಯ ಶೈಲಿಯೂ ಕೂಡ, ಮಹಿಳಾ ಸಬಲೀಕರಣದ ಸಂದೇಶ ಸಾರುತ್ತದೆ ಎನ್ನಲಾಗಿದೆ.
ರಮಾ ಧರಿಸಿದ್ದ ಬೂಟು 630 ಅಮೆರಿಕನ್ ಡಾಲರ್ ಬೆಲೆಯದ್ದು ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ವಿನ್ಯಾಸಕಿ ಗೇಬ್ರಿಯೆಲ್ಲಾ ಕರೆಫಾ ಜಾನ್ಸನ್ ಸ್ಪಷ್ಟನೆ ನೀಡಿದ್ದು, 'ಅದು ಬಾಡಿಗೆಗೆ ತಂದಿರುವ ಬೂಟು' ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.