ADVERTISEMENT

ಕೋವಿಡ್‌ ಉಲ್ಭಣ: ಲಸಿಕೆ ಕಡ್ಡಾಯಗೊಳಿಸಿದ ಫಿಜಿ ಸರ್ಕಾರ

ಏಜೆನ್ಸೀಸ್
Published 9 ಜುಲೈ 2021, 7:39 IST
Last Updated 9 ಜುಲೈ 2021, 7:39 IST
ಬ್ರೆಜಿಲ್‌ನಲ್ಲಿ ಮಹಿಳೆಯೊಬ್ಬರು ಕೋವಿಡ್‌ ಲಸಿಕೆ ಪಡೆಯುತ್ತಿರುವ ದೃಶ್ಯ (ರಾಯಿಟರ್ಸ್‌)
ಬ್ರೆಜಿಲ್‌ನಲ್ಲಿ ಮಹಿಳೆಯೊಬ್ಬರು ಕೋವಿಡ್‌ ಲಸಿಕೆ ಪಡೆಯುತ್ತಿರುವ ದೃಶ್ಯ (ರಾಯಿಟರ್ಸ್‌)   

ಸುವಾ: ಫಿಜಿಯಲ್ಲಿ ಕೊರೊನಾ ವೈರಸ್‌ನ ಡೆಲ್ಟಾ ತಳಿಯ ಸೋಂಕು ತೀವ್ರವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಉದ್ಯೋಗಿಗಳಿಗೆ ಲಸಿಕೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲು ಫಿಜಿ ಸರ್ಕಾರ ನಿರ್ಧರಿಸಿದೆ.

‘ಲಸಿಕೆ ಪಡೆಯದಿದ್ದರೆ, ಉದ್ಯೋಗವಿಲ್ಲ’ ಎಂದು ಹೇಳಿರುವ ಫಿಜಿ ಪ್ರಧಾನಿ ಫ್ರಾಂಕ್ ಬೈನಿರಾಮ ಅವರು, ‘ಫಿಜಿಯು930,000 ಜನಸಂಖ್ಯೆಯನ್ನು ಹೊಂದಿದ್ದು, ಇಲ್ಲಿನ ಎಲ್ಲಾ ಸರ್ಕಾರಿ ನೌಕರರು ಆಗಸ್ಟ್‌ 15ರೊಳಗೆ ಲಸಿಕೆಯ ಮೊದಲ ಡೋಸ್‌ ಹಾಗೂ ನವೆಂಬರ್‌ 1ರೊಳಗೆ ಎರಡನೇ ಡೋಸ್‌ ಪಡೆಯಬೇಕು. ಇಲ್ಲವಾದ್ದಲ್ಲಿ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಖಾಸಗಿ ವಲಯದ ಉದ್ಯೋಗಿಗಳು ಆಗಸ್ಟ್‌ 1ರೊಳಗೆ ಮೊದಲ ಡೋಸ್‌ ಪಡೆಯಬೇಕು. ಈ ನಿಯಮವನ್ನು ಪಾಲಿಸಲು ವಿಫಲವಾದರೆ ಉದ್ಯೋಗಿಗಳು ಭಾರಿ ದಂಡವನ್ನು ಎದುರಿಸಬೇಕಾಗುತ್ತದೆ ಮತ್ತು ಕಂಪನಿಗಳನ್ನು ಮುಚ್ಚುವ ಸಾಧ್ಯತೆಗಳು ಇವೆ’ ಎಂದು ಅವರು ಎಚ್ಚರಿಕೆ ನೀಡಿದರು.

ADVERTISEMENT

‘ಇದು ಸರ್ಕಾರದ ಹೊಸ ನೀತಿಯಾಗಿದೆ. ಇದನ್ನು ಕಾನೂನಿನ ಮೂಲಕ ಜಾರಿಗೆ ತರಲಾಗುವುದು. ಅಲ್ಲದೆ ವಿಜ್ಞಾನಿಗಳು ಕೂಡ ಈ ವಿಧಾನ ಸುರಕ್ಷಿತ ಎಂದಿದ್ದಾರೆ’ ಎಂದು ಫ್ರಾಂಕ್ ಬೈನಿರಾಮ ಅವರು ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫಿಜಿಯಲ್ಲಿ ಕೋವಿಡ್‌ ಮಾರ್ಗಸೂಚಿಗಳಾದ ಅಂತರ ಪಾಲನೆ, ಮಾಸ್ಕ್‌ ಧರಿಸುವಿಕೆಯಂತಹ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಇದರಿಂದ ಸೋಂಕು ಹೆಚ್ಚಾಗುತ್ತಿದೆ. ಹಾಗಾಗಿ ಈ ಕಠಿಣ ನೀತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.