ಸಿಯೋಲ್: ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ದೇಶಗಳು ಪರಸ್ಫರ ಆರೋಪ–ಪ್ರತ್ಯಾರೋಪಗಳಿಗೆ ತೊಡಗಿಕೊಂಡಿವೆ.
‘ಗಡಿ ಭಾಗದಲ್ಲಿ ದಕ್ಷಿಣ ಕೊರಿಯಾ ಸೇನೆಯು ನಮ್ಮ ಸೈನಿಕರ ಮೇಲೆ ಎಚ್ಚರಿಕೆಯ ದಾಳಿ ನಡೆಸುವ ಮೂಲಕ ಗಂಭೀರ ಪ್ರಚೋದನೆ ಮಾಡಿದೆ. ದಕ್ಷಿಣ ಕೊರಿಯಾವು ಉದ್ದೇಶ ಪೂರ್ವಕವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸುತ್ತಿದೆ’ ಎಂದು ಉತ್ತರ ಕೊರಿಯಾದ ಪೀಪಲ್ಸ್ ಆರ್ಮಿಯ ಜನರಲ್ ಸ್ಟಾಫ್‌ನ ಉಪಾಧ್ಯಕ್ಷ ಕೋ ಜೊಂಗ್ ಚೋಲ್ ಹೇಳಿದ್ದಾರೆ.
‘ಗಡಿ ಭದ್ರತೆಯನ್ನು ಉತ್ತಮ ಪಡಿಸುವ ಉದ್ದೇಶದಿಂದ ಹಾಗೂ ದಕ್ಷಿಣ ಕೊರಿಯಾದ ಗಡಿಯನ್ನು ಶಾಶ್ವತವಾಗಿ ನಿರ್ಬಂಧಿಸುವ ಸಲುವಾಗಿ ಹಲವು ಕಾಮಗಾರಿ ನಡೆಯುತ್ತಿದೆ. ಈ ಕುರಿತು ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕ ಸೇನೆಗೆ ಮಾಹಿತಿ ನೀಡಿದ್ದೇವೆ’ ಎಂದು ಕೋ ಜೊಂಗ್ ಚೋಲ್ ತಿಳಿಸಿದ್ದಾರೆ.
‘ಉತ್ತರ ಕೊರಿಯಾದ ಸೈನಿಕರು ಕೇಂದ್ರ ಗಡಿ ಭಾಗದಲ್ಲಿ ಅತಿಕ್ರಮವಾಗಿ ಗಡಿಯನ್ನು ದಾಟಲು ಪ್ರಯತ್ನಿಸಿದ್ದರಿಂದ ಎಚ್ಚರಿಕೆಯ ದಾಳಿ ಮೂಲಕ ಎಚ್ಚರಿಕೆ ನೀಡಲಾಗಿದೆ’ ಎಂದು ದಕ್ಷಿಣ ಕೊರಿಯಾದ ಸೇನಾ ಜಂಟಿ ಮುಖ್ಯಸ್ಥರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಉತ್ತರ ಕೊರಿಯಾ ಸೇನೆಯು ಗಡಿ ದಾಟಿದರೆ ದಕ್ಷಿಣ ಕೊರಿಯಾವು ಎಚ್ಚರಿಕೆಯ ದಾಳಿ ಅಥವಾ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.