ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್
ಕೃಪೆಳ ರಾಯಿಟರ್ಸ್
ಸಿಯೊಲ್: ಉಕ್ರೇನ್‌ನಲ್ಲಿ ನಡೆಸುತ್ತಿರುವ ಸಂಘರ್ಷವನ್ನು ಶಮನಗೊಳಿಸಲು ರಷ್ಯಾ ತೆಗೆದುಕೊಳ್ಳುವ ಯಾವುದೇ ಕ್ರಮಗಳಿಗೆ ಬೇಷರತ್ ಬೆಂಬಲ ನೀಡಲು ಸಿದ್ಧವಿರುವುದಾಗಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ. ಈ ಕುರಿತು, ಸರ್ಕಾರಿ ಸುದ್ದಿ ಸಂಸ್ಥೆ 'ಕೆಸಿಎನ್‌ಎ' ವರದಿ ಮಾಡಿದೆ.
ಸಂಘರ್ಷದ ವೇಳೆ ರಷ್ಯಾಗೆ ಸೇನಾ ಸಹಕಾರ ನೀಡುತ್ತಿರುವ ಉತ್ತರ ಕೊರಿಯಾಕ್ಕೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.
ಪೂರ್ವ ಕರಾವಳಿ ನಗರ ವೊನ್ಸಾನ್‌ನಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ರಕ್ಷಣಾ ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ, ಲಾವ್ರೊವ್ ಅವರನ್ನು ಭೇಟಿಯಾಗಿರುವ ಕಿಮ್, ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗುತ್ತಿರುವ ಹೊತ್ತಿನಲ್ಲಿ ಪ್ರಪಂಚದಾದ್ಯಂತ ಶಾಂತಿ, ಭದ್ರತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳು ಹೆಚ್ಚಿನ ಕೊಡುಗೆ ನೀಡಲಿವೆ ಎಂದು ಕಿಮ್ ಹೇಳಿದ್ದಾರೆ.
'ಉಕ್ರೇನ್‌ನಲ್ಲಿ ಸಂಘರ್ಷವನ್ನು ನಿಭಾಯಿಸುವ ನಿಟ್ಟಿನಲ್ಲಿ ರಷ್ಯಾದ ನಾಯಕತ್ವ ತೆಗೆದುಕೊಳ್ಳುವ ಎಲ್ಲ ಕ್ರಮಗಳನ್ನು ಬೇಷರತ್ತಾಗಿ ಬೆಂಬಲಿಸಲು ಉತ್ತರ ಕೊರಿಯಾ ಸಿದ್ಧವಾಗಿದೆ ಎಂದು ಕಿಮ್ ಜಾಂಗ್ ಉನ್ ಪುನರುಚ್ಚರಿಸಿದ್ದಾರೆ' ಎಂದು 'ಕೆಸಿಎನ್‌ಎ' ವರದಿಯಲ್ಲಿ ಉಲ್ಲೇಖಿಸಿದೆ.
ರಷ್ಯಾ – ಉಕ್ರೇನ್ ಸಂಘರ್ಷ 2022ರ ಫೆಬ್ರುವರಿಯಿಂದ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.