ADVERTISEMENT

Operation Sindhu | ಇರಾನ್‌ನಿಂದ 800ಕ್ಕೂ ಹೆಚ್ಚು ಭಾರತೀಯರು ವಾಪಸ್‌

ಪಿಟಿಐ
Published 21 ಜೂನ್ 2025, 15:16 IST
Last Updated 21 ಜೂನ್ 2025, 15:16 IST
<div class="paragraphs"><p>ಆಪರೇಷನ್ ಸಿಂಧು ಅಡಿ ತಾಯ್ನಾಡಿಗೆ ಮರಳಿದ ಭಾರತೀಯರು</p></div>

ಆಪರೇಷನ್ ಸಿಂಧು ಅಡಿ ತಾಯ್ನಾಡಿಗೆ ಮರಳಿದ ಭಾರತೀಯರು

   

– ಎಕ್ಸ್ ಚಿತ್ರ (@MEAIndia)

ನವದೆಹಲಿ: ‘ಆಪರೇಷನ್ ಸಿಂಧೂ’ ಕಾರ್ಯಾಚರಣೆ ಮೂಲಕ ಇರಾನ್‌ನಿಂದ ಈವರೆಗೂ 800ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿದೆ ಎಂದು ಶನಿವಾರ ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

ADVERTISEMENT

ವಿದ್ಯಾರ್ಥಿಗಳೂ ಸೇರಿದಂತೆ 800ಕ್ಕೂ ಹೆಚ್ಚು ನಾಗರಿಕರನ್ನು ಶುಕ್ರವಾರ ತಡರಾತ್ರಿ ಮತ್ತು  ಶನಿವಾರ ಸಂಜೆವರೆಗೂ ದೆಹಲಿಗೆ ಕರೆತರಲಾಗಿದೆ ಎಂದು ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್‌ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಶನಿವಾರ ಸಂಜೆ 4.30ರ ಸುಮಾರಿಗೆ ಇರಾನ್‌ನ ಮಶ್‌ಹದ್‌ನಿಂದ 310 ನಾಗರಿಕರನ್ನು ಕರೆತಂದ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಈ ಮೂಲಕ ಶನಿವಾರ ಸಂಜೆವರೆಗೆ 827 ಮಂದಿಯನ್ನು ವಾಪಸ್ ಕರೆತರಲಾಗಿದೆ ಎಂದು ಅವರು ಹೇಳಿದ್ದಾರೆ.

‌‘ಆಪರೇಷನ್‌ ಸಿಂಧೂ’ನ ಮೊದಲ ತಂಡದಲ್ಲಿ ಬಂದ 110 ಭಾರತೀಯರನ್ನು ವಿದೇಶಾಂಗ ಖಾತೆಯ ರಾಜ್ಯ ಸಚಿವ ಕೀರ್ತಿ ವರ್ಧನ ಸಿಂಗ್ ಅವರು ಬರಮಾಡಿಕೊಂಡಿದ್ದರು. ಜೂನ್ 20ರಂದು ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಮತ್ತು ನಾಗರಿಕರು ಸೇರಿ 290 ಮಂದಿ ಬಂದಿದ್ದರು. 

ಇದೇ ವೇಳೆ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳಲು ಸಹಕರಿಸಿದ ಇರಾನ್ ಸರ್ಕಾರಕ್ಕೆ ವಿದೇಶಾಂಗ ಇಲಾಖೆ ಧನ್ಯವಾದ ತಿಳಿಸಿದೆ.

ಭಾರತೀಯರ ಜತೆ ನೇಪಾಳ ಲಂಕನ್ನರ ಸ್ಥಳಾಂತರ

ಇರಾನ್‌ನಿಂದ ಎಲ್ಲಾ ಭಾರತೀಯರನ್ನೂ ಸ್ಥಳಾಂತರ ಮಾಡಲು ಸರ್ಕಾರ ನಿರ್ಧರಿಸಿದೆ. ಭಾರತೀಯ ರಾಯಭಾರ ಕಚೇರಿ ತುರ್ತು ಸಂಪರ್ಕ ಸಂಖ್ಯೆಗಳನ್ನೂ ಪ್ರಕಟಿಸಿದೆ.  ಟೆಲಿಗ್ರಾಮ್‌ ಮಾಧ್ಯಮ ಮೂಲಕ ಅಥವಾ ತುರ್ತು ಸಂಪರ್ಕ ಸಂಖ್ಯೆಗಳ (+989010144557 +989128109115 +989128109109) ಮೂಲಕ ಸಂಪರ್ಕ ಮಾಡಿ ನೆರವು ಪಡೆಯಬಹುದು ಎಂದು ‘ಎಕ್ಸ್‌’ನಲ್ಲಿ ಇರಾನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಭಾರತೀಯರು ಮಾತ್ರವಲ್ಲದೆ ‘ಆಪರೇಷನ್ ಸಿಂಧೂ’ ಮೂಲಕ ನೇಪಾಳ ಮತ್ತು ಶ್ರೀಲಂಕಾದ ನಾಗರಿಕರನ್ನೂ ಭಾರತ ಸ್ಥಳಾಂತರ ಮಾಡುತ್ತಿದೆ. ಈಗಾಗಲೇ ಎರಡೂ ದೇಶಗಳ ವಿದೇಶಾಂಗ ಇಲಾಖೆಗಳು ತಮ್ಮ ನಾಗರಿಕರಿಗೆ ಈ ಮಾಹಿತಿ ನೀಡಿವೆ. 

ಕಾಶ್ಮೀರ ವಿದ್ಯಾರ್ಥಿಗಳು ವಾಪಸ್‌: ಪೋಷಕರ ಆನಂದಬಾಷ್ಪ

ಯುದ್ಧಪೀಡಿತ ಇರಾನ್‌ನಿಂದ 256 ವಿದ್ಯಾರ್ಥಿಗಳನ್ನು ಹೊತ್ತು ತಂದ ಬೃಹತ್‌ ವಾಯು ಸ್ಥಳಾಂತರ ವಿಮಾನ ಶನಿವಾರ ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಕಾಶ್ಮೀರ ಕಣಿವೆಯಲ್ಲಿ ಬಹುತೇಕರಿದ್ದ ವಿಮಾನ ಇಳಿಯುತ್ತಿದ್ದಂತೆ ತಮ್ಮ ಮಕ್ಕಳ ಮೊಗವನ್ನು ನೋಡಿ ಪೋಷಕರ ಕಣ್ಣಲ್ಲಿ ಆನಂದಬಾಷ್ಪ ಸುರಿಯಿತು.

‘ಸುರಕ್ಷಿತವಾಗಿ ನಮ್ಮ ಮಕ್ಕಳನ್ನು ಕರೆತಂದ ಭಾರತ ಸರ್ಕಾರ ಮತ್ತು ಸಹಕರಿಸಿದ ಇರಾನ್ ಸರ್ಕಾರಕ್ಕೆ ಧನ್ಯವಾದ’ ಎಂದು ಜಮ್ಮು–ಕಾಶ್ಮೀರ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ತಿಳಿಸಿದೆ. 1000ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ವಿಶೇಷ ವಿಮಾನಗಳ ಮೂಲಕ ವಾಪಸ್ ಕರೆತರಲಾಗುತ್ತಿದೆ. ಅಶ್ಗಾಬಾತ್‌ನಿಂದ ಹೊರಟಿರುವ ವಿಮಾನ ಭಾನುವಾರ ಮುಂಜಾನೆ 3ಕ್ಕೆ ನವದೆಹಲಿ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಎರಡು ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಕರೆತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.