ADVERTISEMENT

ಸುಡಾನ್‌ ಸಂಘರ್ಷ: ಆರು ತಿಂಗಳಲ್ಲಿ 800ಕ್ಕೂ ಹೆಚ್ಚು ಜನರು ಸಾವು– UNHCR ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2023, 3:29 IST
Last Updated 12 ನವೆಂಬರ್ 2023, 3:29 IST
<div class="paragraphs"><p>ಸುಡಾನ್‌ ಸಂಘರ್ಷ</p></div>

ಸುಡಾನ್‌ ಸಂಘರ್ಷ

   

(ರಾಯಿಟರ್ಸ್ ಫೈಲ್ ಫೋಟೋ)

ಖಾರ್ಟೌಮ್(ಸುಡಾನ್): ಸುಡಾನ್‌ನ ವೆಸ್ಟ್ ಡಾರ್ಫರ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಣ ಸಂಘರ್ಷದಿಂದ ಕಳೆದ ಆರು ತಿಂಗಳಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 4.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್(UNHCR) ಹೇಳಿದೆ.

ADVERTISEMENT

ಸುಡಾನ್‌ನ ಡಾರ್ಫರ್ ಪ್ರದೇಶದಾದ್ಯಂತ ಸುಮಾರು 100 ಶೆಲ್ಟರ್‌ಗಳನ್ನು ನೆಲಸಮಗೊಳಿಸಲಾಗಿದೆ. ಯುಎನ್‌ಎಚ್‌ಸಿಆರ್ ಪರಿಹಾರ ವಸ್ತುಗಳು ಸೇರಿದಂತೆ ವ್ಯಾಪಕ ಲೂಟಿ ಕೂಡ ನಡೆದಿದೆ ಎಂದು ವಿಶ್ವಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಎರಡು ದಶಕಗಳ ಹಿಂದೆ ನಡೆದ ಸಂಘರ್ಷದಲ್ಲಿ ಡಾರ್ಫೂರ್‌ನಾದ್ಯಂತ ಸಾವಿರಾರು ಜನರು ಹತ್ಯೆಗೀಡಾಗಿದ್ದರು. ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದರು. ಜನಾಂಗೀಯ ಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುಎನ್‌ ವಿಶೇಷ ಸಲಹೆಗಾರ ಆಲಿಸ್ ವೈರಿಮು ನ್ಡೆರಿಟು ಅವರು ಕಳೆದ ಜೂನ್‌ನಲ್ಲಿ ಎಚ್ಚರಿಕೆ ನೀಡಿದ್ದರು.

ಜನಾಂಗೀಯತೆಯ ಆಧಾರದ ಮೇಲೆ ದಾಳಿ ಸೇರಿದಂತೆ ಪಶ್ಚಿಮ ಡಾರ್ಫೂರ್‌ನಲ್ಲಿ ಸಂಘರ್ಷ ಮುಂದುವರಿದರೆ, ಇದು ಯುದ್ಧ ಅಪರಾಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಕಾರಣವಾಗಬಹುದು. ಇದರ ಪರಿಣಾಮವಾಗಿ ನಿರಂತರ ಲೈಂಗಿಕ ಹಿಂಸೆ, ಚಿತ್ರಹಿಂಸೆ, ಮಾನವ ಹತ್ಯೆಗಳು, ನಾಗರಿಕರ ಸುಲಿಗೆ ಬಗ್ಗೆ ಯುಎನ್‌ ನಿರಾಶ್ರಿತರ ಸಂಸ್ಥೆ ಕಳವಳ ವ್ಯಕ್ತಪಡಿಸಿತ್ತು.

'20 ವರ್ಷಗಳ ಹಿಂದೆ, ಡಾರ್ಫೂರ್ನಲ್ಲಿ ನಡೆದ ಭೀಕರ ದೌರ್ಜನ್ಯಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಿಂದ ಜಗತ್ತು ಆಘಾತಕ್ಕೊಳಗಾಗಿತ್ತು. ಇದೇ ರೀತಿಯ ಘಟನೆ ಮರುಕಳಿಸಬಹುದೆಂದು ನಾವು ಆತಂಕಗೊಂಡಿದ್ದೇವೆ. ಇಂತಹ ಮತ್ತೊಂದು ದುರಂತವನ್ನು ತಪ್ಪಿಸುವುದು ಬಹಳ ಮುಖ್ಯ ಎಂದು ಯುಎನ್‌ಎಚ್‌ಸಿಆರ್ ವಿಭಾಗದ ವಕ್ತಾರ ಫಿಲಿಪ್ಪೊ ಗ್ರಾಂಡಿ ಹೇಳಿದ್ದಾರೆ.

ವಿಶ್ವಸಂಸ್ಥೆ ಪ್ರಕಾರ, ಕಳೆದ ಏಪ್ರಿಲ್ ತಿಂಗಳಲ್ಲಿ ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಸಂಘರ್ಷ ಪ್ರಾರಂಭವಾದಾಗಿನಿಂದ ಸುಮಾರು 4.8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. 1.2 ಮಿಲಿಯನ್ ಜನರು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಳೆದ ವಾರವೊಂದರಲ್ಲೇ 8,000 ಕ್ಕೂ ಹೆಚ್ಚು ಜನರು ಚಾಡ್‌ಗೆ ಪಲಾಯನ ಮಾಡಿದ್ದಾರೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.