ಪಾಕಿಸ್ತಾನ-ಭಾರತ
ರಾಯಿಟರ್ಸ್ ಚಿತ್ರ
ವಿಶ್ವಸಂಸ್ಥೆ: ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳಿಗೆ ಹಣದ ನೆರವು ನೀಡಿದ್ದನ್ನು, ಬೆಂಬಲ ಒದಗಿಸಿದ್ದನ್ನು ಅಲ್ಲಿನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಬಹಿರಂಗವಾಗಿ ಒಪ್ಪಿಕೊಂಡಿರುವುದು ಅದು ಜಾಗತಿಕ ಭಯೋತ್ಪಾದನೆಗೆ ಹಾಲೆರೆಯುವ, ಪ್ರಾದೇಶಿಕ ಅಸ್ಥಿರತೆ ಉಂಟುಮಾಡುವ ‘ಪುಂಡ ದೇಶ’ ಎಂಬುದನ್ನು ತೋರಿಸುತ್ತಿದೆ ಎಂದು ಭಾರತ ಹೇಳಿದೆ.
ವಿಶ್ವಸಂಸ್ಥೆಯ ಭಯೋತ್ಪಾದನಾ ವಿರೋಧಿ ಕಚೇರಿಯ ‘ಭಯೋತ್ಪಾದನೆಯ ಸಂತ್ರಸ್ತರ ಒಕ್ಕೂಟ ಜಾಲ’ಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತ ಉಪ ಶಾಶ್ವತ ಪ್ರತಿನಿಧಿ ಯೋಜ್ಞಾ ಪಟೇಲ್ ಅವರು ಈ ಮಾತು ಹೇಳಿದ್ದಾರೆ. ಪಾಕಿಸ್ತಾನದ ಪ್ರತಿನಿಧಿಯು ಪಹಲ್ಗಾಮ್ ದಾಳಿಯ ಬಗ್ಗೆ ಉಲ್ಲೇಖಿಸಿದಾಗ ಯೋಜ್ಞಾ ಅವರು ತಿರುಗೇಟು ನೀಡಿದ್ದಾರೆ.
‘ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡಿದ, ತರಬೇತಿ ಒದಗಿಸಿದ, ಹಣಕಾಸಿನ ನೆರವು ಕೊಟ್ಟ ಇತಿಹಾಸ ಪಾಕಿಸ್ತಾನಕ್ಕೆ ಇದೆ ಎಂಬುದನ್ನು ಆಸಿಫ್ ಅವರು ಒಪ್ಪಿಕೊಂಡಿರುವುದನ್ನು ಇಡೀ ವಿಶ್ವ ಕೇಳಿಸಿಕೊಂಡಿದೆ’ ಎಂದು ಯೋಜ್ಞಾ ಹೇಳಿದ್ದಾರೆ.
‘ನಾವು ಈ ಎಲ್ಲ ಕೊಳಕು ಕೆಲಸಗಳನ್ನು ಅಮೆರಿಕಕ್ಕಾಗಿ, ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯರಿಗಾಗಿ ಮೂರು ದಶಕಗಳಿಂದ ಮಾಡುತ್ತಿದ್ದೇವೆ’ ಎಂದು ಆಸಿಫ್ ಅವರು ‘ಸ್ಕೈ ನ್ಯೂಸ್’ಗೆ ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ನಂತರದಲ್ಲಿ ಜಾಗತಿಕ ಸಮುದಾಯವು ಭಾರತಕ್ಕೆ ನೀಡಿದ ಬೆಂಬಲವು, ಭಯೋತ್ಪಾದನೆಯನ್ನು ಜಾಗತಿಕ ಸಮುದಾಯ ಸಹಿಸಿಕೊಳ್ಳುವುದಿಲ್ಲ ಎಂಬುದಕ್ಕೆ ಸಾಕ್ಷಿ ಎಂದೂ ಯೋಜ್ಞಾ ಹೇಳಿದ್ದಾರೆ.
ಬಿಕ್ಕಟ್ಟು ತಿಳಿಗೊಳಿಸಲು ಗುಟೆರಸ್ ನೆರವು
ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸಲು ಮಾತುಕತೆಗಳನ್ನು ಪುನರಾರಂಭಿಸಲು ಎರಡೂ ದೇಶಗಳಿಗೆ ಒಪ್ಪಿಗೆಯಾಗುವ ಯಾವುದೇ ಕ್ರಮಕ್ಕೆ ಬೆಂಬಲ ಒದಗಿಸಲು ಸಿದ್ಧ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಹೇಳಿರುವುದಾಗಿ ಅವರ ಕಚೇರಿ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಈಗಿನ ಸ್ಥಿತಿಯ ವಿಚಾರವಾಗಿ ಗುಟೆರಸ್ ಅವರು ತೀವ್ರ ಕಳವಳ ಹೊಂದಿದ್ದಾರೆ. ಎರಡೂ ದೇಶಗಳು ಗರಿಷ್ಠ ಸಂಯಮ ಪ್ರದರ್ಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ ಎಂದು ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.