ಭಾರತೀಯ ಸೇನೆ
(ಪಿಟಿಐ ಸಂಗ್ರಹ ಚಿತ್ರ)
ಇಸ್ಲಾಮಾಬಾದ್: ಭಾರತವು ಮುಂದಿನ 24ರಿಂದ 36 ಗಂಟೆಗಳಲ್ಲಿ ತನ್ನ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿರುವುದು ಗುಪ್ತಚರ ಮೂಲಗಳಿಂದ ತಿಳಿದು ಬಂದಿದೆ ಎಂದು ಪಾಕಿಸ್ತಾನ ಬುಧವಾರ ಹೇಳಿದೆ.
‘ಒಂದು ವೇಳೆ ಸೇನಾ ಕಾರ್ಯಾಚರಣೆ ನಡೆಸಿದ್ದೇ ಆದರೆ, ತಕ್ಕ ಪರಿಣಾಮ ಎದುರಿಸಬೇಕು’ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ.
ಪಹಲ್ಗಾಮ್ ಭಯೋತ್ಪಾದಕರ ದಾಳಿಗೆ ಪ್ರತ್ಯುತ್ತರ ನೀಡಲು ದಾಳಿಯ ಮಾದರಿ, ಗುರಿ ಹಾಗೂ ಸಮಯ ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಕಾರ್ಯಾಚರಣೆ ಸ್ವಾತಂತ್ರ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೇನೆಗಳ ಮುಖ್ಯಸ್ಥರಿಗೆ ಸೂಚಿಸಿದ ಕೆಲವೇ ಗಂಟೆಗಳ ಬಳಿಕ ಪಾಕಿಸ್ತಾನದ ಹೇಳಿಕೆ ಹೊರಬಿದ್ದಿದೆ.
ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡದ ಬಗ್ಗೆ ‘ಹುಸಿ ಆರೋಪ’ಗಳ ಆಧಾರದ ಮೇಲೆ ಭಾರತವು ಪಾಕಿಸ್ತಾನದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಹೇಳಿದ್ದಾರೆ.
ಪಾಕಿಸ್ತಾನವು ಸ್ವತಃ ಭಯೋತ್ಪಾದನೆಯಿಂದ ಸಾಕಷ್ಟು ಕಷ್ಟ ಅನುಭವಿಸಿದೆ ಮತ್ತು ಭಯೋತ್ಪಾದನೆಯನ್ನು ಅದು ಯಾವುದೇ ರೂಪದಲ್ಲಿದ್ದರೂ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಹಲ್ಗಾಮ್ ದಾಳಿಯ ಬಗ್ಗೆ ತಟಸ್ಥ ತನಿಖಾ ಆಯೋಗ ನಡೆಸುವ ‘ವಿಶ್ವಾಸಾರ್ಹ, ಪಾರದರ್ಶಕ ಮತ್ತು ಸ್ವತಂತ್ರ’ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆಯನ್ನು ಭಾರತಕ್ಕೆ ಕೊಟ್ಟಿದ್ದೇವೆ. ಆದರೆ ಭಾರತವು ತನಿಖೆಯಿಂದ ತಪ್ಪಿಸಿಕೊಳ್ಳಲು, ಯುದ್ಧದ ಮಾರ್ಗವನ್ನು ಆರಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
‘ಭಾರತವು ಸೇನಾ ಕಾರ್ಯಾಚರಣೆ ನಡೆಸಿದರೆ, ಪಾಕಿಸ್ತಾನವು ತಿರುಗೇಟು ನೀಡಲಿದೆ ಎಂಬುದನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಪರಿಸ್ಥಿತಿ ಬಿಗಡಾಯಿಸಿದರೆ ಅದರ ಸಂಪೂರ್ಣ ಹೊಣೆಗಾರಿಕೆ ಭಾರತದ ಮೇಲಿರುತ್ತದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.