ಪಾಕ್ ಪ್ರಧಾನಿ ಶಹಾಬಾಜ್ ಶರೀಫ್
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಬಾಕಿಯಿರುವ ಎಲ್ಲ ವಿವಾದಗಳನ್ನು ಬಗೆಹರಿಸಲು ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಂಗಳವಾರ ನಡೆಸಿದ ದೂರವಾಣಿ ಸಂಭಾಷಣೆ ವೇಳೆ ಷರೀಫ್ ಅವರು ಭಾರತದೊಂದಿಗಿನ ಮಾತುಕತೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಜಮ್ಮು ಮತ್ತು ಕಾಶ್ಮೀರ, ನೀರು ಹಂಚಿಕೆ ಹಾಗೂ ಭಯೋತ್ಪಾದನೆ ಸೇರಿದಂತೆ ಎಲ್ಲ ವಿವಾದಿತ ವಿಷಯಗಳ ಕುರಿತು ಭಾರತದ ಜತೆ ಮಾತುಕತೆಗೆ ಸಿದ್ಧವಿರುವುದಾಗಿ ಷರೀಫ್ ಅವರು ಸಲ್ಮಾನ್ ಅವರಿಗೆ ತಿಳಿಸಿದ್ದಾರೆ’ ಎಂದು ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತವು ಪಾಕಿಸ್ತಾನದ ಜತೆಗಿನ ಎಲ್ಲ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿತ್ತು.
ಷರೀಫ್ ಅವರು ಕಳೆದ ತಿಂಗಳು ಇರಾನ್ ಮತ್ತು ಅಜರ್‌ಬೈಜಾನ್ ಭೇಟಿಯ ಸಂದರ್ಭದಲ್ಲೂ ಭಾರತದೊಂದಿಗೆ ಶಾಂತಿ ಮಾತುಕತೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದರು.
ಆದರೆ, ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಭಯೋತ್ಪಾದನೆಯ ವಿಚಾರವಾಗಿ ಮಾತ್ರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದಾಗಿ ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.