ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ನ್ಯೂಯಾರ್ಕ್: ‘ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಇದೆ. ಒಂದಲ್ಲಾ ಒಂದು ಮಾರ್ಗದಲ್ಲಿ ಅದನ್ನು ಅವರೇ ಪರಿಹರಿಸಿಕೊಳ್ಳುತ್ತಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
26 ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಎರಡೂ ದೇಶಗಳ ನಡುವೆ ಉಂಟಾಗಿರುವ ಉದ್ವಿಗ್ನತೆ ಕುರಿತು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
‘ನಾನು ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಅತ್ಯಂತ ಹತ್ತಿರವಾದವನು. ಆದರೆ ಕಾಶ್ಮೀರ ವಿಷಯದಲ್ಲಿ ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಅವರ ನಡುವೆ ಸಂಘರ್ಷವಿದೆ. ಆದರೆ ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಘಟನೆ ನಿಜಕ್ಕೂ ಆಘಾತ ಮೂಡಿಸುವಂತದ್ದು’ ಎಂದಿದ್ದಾರೆ.
‘ಗಡಿ ಕುರಿತು ಸುಮಾರು 1,500 ವರ್ಷಗಳಿಂದ ಎರಡೂ ರಾಷ್ಟ್ರಗಳ ನಡುವೆ ಇರುವ ಸಂಘರ್ಷವನ್ನು ಅವರೇ ಪರಿಹರಿಸಿಕೊಳ್ಳುತ್ತಾರೆ. ಇಬ್ಬರೂ ನಾಯಕರು ನನಗೆ ಪರಿಚಿತರೇ. ಅವರ ನಡುವೆ ಇವೆಲ್ಲಾ ಇದ್ದದ್ದೇ’ ಎಂದಿದ್ದಾರೆ.
ಪಾಕಿಸ್ತಾನ ಮೂಲದ ಲಷ್ಕರ್ ಎ ತಯಬಾ ಸಂಘಟನೆಯ ಅಂಗ ಸಂಸ್ಥೆ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದ ಅಮಾನತು ಸೇರಿದಂತೆ ಇಸ್ಲಾಮಾಬಾದ್ ನಡುವಿನ ಎಲ್ಲಾ ರಾಜತಾಂತ್ರಿಕ ಸಂಭಂಧವನ್ನು ಭಾರತ ಕಡಿದುಕೊಂಡಿತು. ಭಾರತದ ಕ್ರಮಕ್ಕೆ ಪ್ರತಿಯಾಗಿ ಶಿಮ್ಲಾ ಒಪ್ಪಂದ ಅಮಾನತು, ಭಾರತದ ವಿಮಾನಗಳಿಗೆ ಪಾಕಿಸ್ತಾನ ವಾಯು ಪ್ರದೇಶ ಪ್ರವೇಶ ನಿಷಿದ್ಧ ಸಹಿತ ಹಲವು ಕ್ರಮಗಳನ್ನು ಪಾಕಿಸ್ತಾನ ಕೈಗೊಂಡಿರುವುದಾಗಿ ಘೋಷಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.