ಪಾಕಿಸ್ತಾನ-ಭಾರತ
ರಾಯಿಟರ್ಸ್ ಚಿತ್ರ
ಮಾಸ್ಕೊ: ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದರೆ ಅಥವಾ ಸಿಂಧೂ ನದಿ ನೀರಿನ ಹರಿವಿಗೆ ತಡೆ ಒಡ್ದಿದರೆ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿ ಪಾಕಿಸ್ತಾನ ಇಂದು (ಸೋಮವಾರ) ಬೆದರಿಕೆ ಹಾಕಿದೆ.
ರಷ್ಯಾದ ಟಿಎಎಸ್‌ಎಸ್ ನ್ಯೂಸ್ ಏಜೆನ್ಸಿಯಲ್ಲಿ ಈ ಕುರಿತು ಮಾತನಾಡಿದ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿ ಜಮಾಲಿ ಭಾರತಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಏಪ್ರಿಲ್ 26ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ದಾಳಿಯಲ್ಲಿ ಭಾಗಿಯಾದವರನ್ನು ಹಾಗೂ ಬೆಂಬಲಿಸಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದಾಗಿ ಭಾರತ ಸರ್ಕಾರ ಹೇಳಿದೆ.
'ಆದರೆ ಭಾರತದಿಂದ ಎದುರಾಗುವ ಯಾವುದೇ ರೀತಿಯ ಆಕ್ರಮಣಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸಲು ಪಾಕಿಸ್ತಾನ ಸಿದ್ಧವಾಗಿದೆ. ಪಾಕಿಸ್ತಾನ ತನ್ನೆಲ್ಲ ಬಲವನ್ನು ಪ್ರಯೋಗ ಮಾಡಲಿದೆ. ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರ ಎರಡೂ ರೀತಿಯ ಯುದ್ಧಕ್ಕೂ ಸಜ್ಜಾಗಿದ್ದೇವೆ' ಎಂದು ಅವರು ಹೇಳಿದ್ದಾರೆ.
ಅದೇ ರೀತಿ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿ ನೀರಿನ ಹರಿವನ್ನು ತಡೆದರೆ ಅದು ಯುದ್ಧಕ್ಕೆ ಸಮಾನವಾಗಿರಲಿದೆ. ಇದರ ವಿರುದ್ಧವೂ ನ್ಯೂಕ್ಲಿಯರ್ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
'ಪರಮಾಣು ಸಾಮರ್ಥ್ಯದ ರಾಷ್ಟ್ರ ಆಗಿದ್ದರಿಂದ ಉಭಯ ದೇಶಗಳು ಉದ್ವಿಗ್ನ ಶಮನಕ್ಕೆ ಯತ್ನಿಸಬೇಕು' ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.