ADVERTISEMENT

ಪಾಕ್‌ ಉಗ್ರರ ನೆಚ್ಚಿನ ತಾಣ: ವಿಶ್ವಸಂಸ್ಥೆಗೆ ಭಾರತದ ಕಾಯಂ ಪ್ರತಿನಿಧಿ ಆರೋಪ

ಪಿಟಿಐ
Published 13 ಸೆಪ್ಟೆಂಬರ್ 2019, 20:39 IST
Last Updated 13 ಸೆಪ್ಟೆಂಬರ್ 2019, 20:39 IST
ಸಂದೀಪ್ ಹಾಗೂ ಮಲೀಹಾ
ಸಂದೀಪ್ ಹಾಗೂ ಮಲೀಹಾ    

ವಿಶ್ವಸಂಸ್ಥೆ: ಪಾಕಿಸ್ತಾನವು ‘ಭಯೋತ್ಪಾದಕರ ನೆಚ್ಚಿನ ತಾಣ’ವಾಗಿದೆ. ವಿಶ್ವಸಂಸ್ಥೆಯ ವೇದಿಕೆಯನ್ನು ಪಾಕ್‌ ‘ಆಧಾರರಹಿತ ಮತ್ತು ಮೋಸಗಾರಿಕೆ’ಯ ನಿರೂಪಣೆಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಭಾರತ ಆರೋಪಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪ ಮಾಡಿದ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.

ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಶಾಶ್ವತ ಪ್ರತಿನಿಧಿ ಮಲೀಹಾ ಲೋಧಿ ಅವರು 2018 ರ ಭದ್ರತಾ ಮಂಡಳಿ ವರದಿ ಕುರಿತು ನಡೆದ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದು ಮತ್ತು 370 ನೇ ಕಲಂ ಅನ್ನು ಅಸಿಂಧುಗೊಳಿಸಿದ್ದರ ಬಗ್ಗೆಯೂ ಮಾತನಾಡಿದ್ದರು.

ADVERTISEMENT

‘ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದು ಮಾಡಿರುವುದು ಬಹು ಭದ್ರತಾ ಮಂಡಳಿಗಳ ನಿರ್ಣಯದ ಸ್ಪಷ್ಟ ಉಲ್ಲಂಘನೆ’ ಎಂದು ಲೋಧಿ ಆರೋಪಿಸಿದ್ದರು.

ಕಾಶ್ಮೀರದಲ್ಲಿ ಕರ್ಫ್ಯೂವನ್ನು ಹಿಂತೆಗೆಯಬೇಕು ಮತ್ತು ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡುವಂತೆ ಭಾರತವನ್ನು ಭದ್ರತಾ ಮಂಡಳಿ ಒತ್ತಾಯಿಸಬೇಕು ಎಂದು ಮಲೀಹಾ ಆಗ್ರಹಿಸಿದ್ದರು.

ಈ ಎಲ್ಲಾ ಆರೋಪ ಮತ್ತು ಆಗ್ರಹಗಳಿಗೆ ತಕ್ಕ ಪ್ರತ್ಯುತ್ತರ ನೀಡಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಆಗಿರುವ ಸಂದೀಪ್ ಕುಮಾರ್ ಬಯ್ಯಪು ಅವರು, ‘ಭಾರತದ ಬಗ್ಗೆ ಆಧಾರರಹಿತ ಮತ್ತು ಮೋಸಗಾರಿಕೆ’ಯ ನಿರೂಪಣೆ ಮಾಡಲು ಮತ್ತೊಮ್ಮೆ ಪಾಕಿಸ್ತಾನ ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿಕೊಂಡಿದೆ. ಈ ಹಿಂದೆ ನಡೆಸಿದ ಯಾವ ಪ್ರಯತ್ನಗಳೂ ಫಲಪ್ರದವಾಗಿಲ್ಲ ಈಗಲೂ ಅವು ಯಶಸ್ಸು ನೀಡುವುದಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.