ADVERTISEMENT

ಇಫ್ತಾರ್ ಕೂಟ: ಪಾಕಿಸ್ತಾನದಲ್ಲಿ ಭಾರತದ ಅತಿಥಿಗಳಿಗೆ ಕಿರುಕುಳ, ಬೆದರಿಕೆ

ಇಫ್ತಾರ್‌ಗೆ ಬಂದವರ ತಪಾಸಣೆ ನೆಪದಲ್ಲಿ ಅವಮಾನ

ಪಿಟಿಐ
Published 2 ಜೂನ್ 2019, 14:48 IST
Last Updated 2 ಜೂನ್ 2019, 14:48 IST
ಭಾರತದ ಹೈಕಮಿಷನರ್‌ ಅಜಯ್‌ ಬಿಸಾರಿಯಾ
ಭಾರತದ ಹೈಕಮಿಷನರ್‌ ಅಜಯ್‌ ಬಿಸಾರಿಯಾ    

ಇಸ್ಲಾಮಾಬಾದ್‌:ಇಲ್ಲಿನ ಭಾರತೀಯ ಹೈ ಕಮಿಷನರ್‌ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ಭಾರತದ ಅತಿಥಿಗಳಿಗೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ನೆಪದಲ್ಲಿ ಪಾಕಿಸ್ತಾನದ ಅಧಿಕಾರಿಗಳು ಸಾಕಷ್ಟು ಕಿರುಕುಳ ನೀಡಿದ್ದಲ್ಲದೆ ಬೆದರಿಕೆ ಒಡ್ಡಿದ್ದಾರೆ. ಒಂದಲ್ಲ ಒಂದು ನೆಪವೊಡ್ಡಿ ಅತಿಥಿಗಳನ್ನು ತಡೆದು ಅವಮಾನಿಸಿದ್ದಾರೆ.

ಭಾರತದ ಹೈಕಮಿಷನರ್‌ ಅಜಯ್‌ ಬಿಸಾರಿಯಾ ಅವರು ಸೆರೇನಾ ಹೋಟೆಲ್‌ನಲ್ಲಿ ಇಫ್ತಾರ್‌ ಕೂಟವನ್ನು ಆಯೋಜಿಸಿದ್ದರು. ಇದಕ್ಕೆ ಅವರು ಪಾಕಿಸ್ತಾನದಾದ್ಯಂತ ಅತಿಥಿಗಳನ್ನೂ ಆಹ್ವಾನಿಸಿದ್ದರು.

ಐಷಾರಾಮಿ ಹೋಟೆಲ್ ಆವರಣದಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಇಫ್ತಾರ್‌ನಲ್ಲಿ ಭಾಗವಹಿಸಿದ್ದವರು ಹೇಳಿದ್ದಾರೆ.

ADVERTISEMENT

‘ಹೋಟೆಲ್‌ನಲ್ಲಿ ಅಸಾಮಾನ್ಯವಾದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ಯಾರ ಬಳಿ ಆಹ್ವಾನ ಪತ್ರಿಕೆ ಮತ್ತು ಗುರುತು ಪತ್ರಗಳಿದ್ದವೊ ಅವರಿಗೆ ಪ್ರವೇಶ ನೀಡಲಾಗುತ್ತಿತ್ತು’ ಎಂದು ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ಹೋಟೆಲ್‌ ಆವರಣದಲ್ಲಿ ನಿಯೋಜಿಸಲಾಗಿದ್ದ ಪಾಕಿಸ್ತಾನದ ಭದ್ರತಾ ಪಡೆ ಸಿಬ್ಬಂದಿ ಅತಿಥಿಗಳನ್ನು ತಳ್ಳಿ ಅವಮಾನಿಸಿದ್ದಾರೆ. ಕೆಟ್ಟ ಮಾತುಗಳಿಂದ ನಿಂದಿಸಿದ್ದಾರೆ ಎಂದು ಭಾರತದ ಹೈಕಮಿಷನ್‌ ಹೇಳಿಕೆಯಲ್ಲಿ ತಿಳಿಸಿದೆ.ಇಫ್ತಾರ್‌ನಲ್ಲಿ ಭಾಗವಹಿಸದಂತೆ ಮಾಡಲೆಂದೇ ಪಾಕ್ ಭದ್ರತಾ ಪಡೆಗಳು ಸಿದ್ಧತೆ ಮಾಡಿಕೊಂಡಿದ್ದವು ಎಂದು ದೂರಿದೆ.

ಹೋಟೆಲ್‌ನ ಮುಖ್ಯ ರಸ್ತೆಯಲ್ಲಿ ನಿಯೋಜನೆಯಾಗಿದ್ದ ಭದ್ರತಾ ಸಿಬ್ಬಂದಿ ಭಾರತದ ರಾಜತಾಂತ್ರಿಕ ಅತಿಥಿಗಳ ಜತೆ ಒರಟಾಗಿ ವರ್ತಿಸಿದ್ದಾರೆ.ಕೆಲವು ಅಧಿಕಾರಿಗಳನ್ನು ತಳ್ಳಿದ್ದಾರೆ. ಕೆಲವರ ಮೊಬೈಲ್‌ ಫೋನ್‌ ಅನ್ನು ಕಸಿದುಕೊಂಡಿದ್ದಾರೆ ಎಂದು ತಿಳಿಸಿದೆ. ಭಾರತ ಅಧಿಕಾರಿಗಳಲ್ಲದೆ ಪಾಕಿಸ್ತಾನದ ರಾಜತಾಂತ್ರಿಕರಿಗೂ ಕೆಟ್ಟ ಅನುಭವವಾಗಿದೆ.

‘ಇಂಡಿಯನ್‌ ಹೈಕಮಿಷನ್ ಆಯೋಜಿಸಿದ್ದ ಇಫ್ತಾರ್‌ಗೆ ಬಂದಿದ್ದೆ. ಹೋಟೆಲ್‌ಗೆ ಬ್ಯಾರಿಕೇಡ್‌ ಹಾಕಲಾಗಿತ್ತು. ಇಫ್ತಾರ್ ಅನ್ನು ರದ್ದುಪಡಿಸಿರುವುದಾಗಿ ಕೆಲವರು ಹೇಳಿದರು. ಆದರೆ ಒತ್ತಾಯ ಮಾಡಿ ಕೇಳಿದಾಗ ಮತ್ತೊಂದು ಗೇಟ್‌ ಮೂಲಕ ಬರುವಂತೆ ತಿಳಿಸಿದರು. ಅಲ್ಲಿಗೆ ಹೋದರೆ ಗೇಟ್‌ ಮುಚ್ಚಲಾಗಿತ್ತು. ಕೊನೆಗೆ ಮುಖ್ಯದ್ವಾರದ ಮೂಲಕ ಬನ್ನಿ ಎಂದರು. ಏನು ನಡೆಯುತ್ತಿದೆ ಎಂಬುದೇ ತಿಳಿಯಲಿಲ್ಲ’ ಎಂದು ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಹಿರಿಯ ಮುಖಂಡರೊಬ್ಬರು ತಿಳಿಸಿದರು.

‘ಇದು ರಾಜತಾಂತ್ರಿಕ ನಿಯಮಗಳ ಸಂಪೂರ್ಣ ಉಲ್ಲಂಘನೆ. ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಲ್ಲದೆ ನಿಲ್ಲಿಸಿದ್ದ ಕಾರುಗಳನ್ನು ಲಿಫ್ಟ್‌ ಬಳಸಿ ತೆರವುಗೊಳಿಸಲಾಗಿದೆ’ ಎಂದು ಭಾರತದ ಹೈ ಕಮಿಷನ್‌ ಆರೋಪಿಸಿದೆ.

‘ಇಫ್ತಾರ್ ಕೂಟಕ್ಕೆ ಬರಲು ಹಲವು ತೊಂದರೆ ಅನುಭವಿಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ’ ಎಂದು ಅಜಯ್‌ ಬಿಸಾರಿಯಾ ಹೇಳಿದ್ದಾರೆ.

ತನಿಖೆಗೆ ಆಗ್ರಹ: ಕಿರುಕುಳ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಭಾರತ ಈ ಕುರಿತು ತ್ವರಿತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ಮೂರ್ಖತನದ ಕ್ರಮ: ಒಮರ್ ಅಬ್ದುಲ್ಲಾ

ಶ್ರೀನಗರ: ಇಫ್ತಾರ್ ಕೂಟದಲ್ಲಿ ಅತಿಥಿಗಳಿಗೆ ಅವಮಾನಿಸಿರುವುದು ‘ಮೂರ್ಖತನದ ರಾಜತಾಂತ್ರಿಕತೆ’ ಎಂದು ನ್ಯಾಷನಲ್‌ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಈ ರೀತಿಯ ಅವಿವೇಕವನ್ನು ನಿಲ್ಲಿಸಬೇಕು ಎಂದು ಟ್ವಿಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.