ADVERTISEMENT

ಪಾಕ್‌: ಇಮ್ರಾನ್‌ ಖಾನ್‌ ನಿವಾಸದಲ್ಲಿ ಪೊಲೀಸರ ಶೋಧ

ಪಿಟಿಐ
Published 19 ಮೇ 2023, 16:06 IST
Last Updated 19 ಮೇ 2023, 16:06 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಲಾಹೋರ್‌: ‘ಭಯೋತ್ಪಾದಕರು ಅಡಗಿರುವ ಶಂಕೆಯ ಆಧಾರದಲ್ಲಿ ಪಂಜಾಬ್‌ ಪೊಲೀಸರು ಜಮಾನ್‌ ಪಾರ್ಕ್‌ನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ನಿವಾಸದಲ್ಲಿ ಶುಕ್ರವಾರ ಶೋಧ ನಡೆಸಿದ್ದಾರೆ’ ಎಂದು ಡಾನ್‌ ಪತ್ರಿಕೆ ವರದಿ ಮಾಡಿವೆ.

‘ಶೋಧ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್‌ ನಿಯೋಗದಲ್ಲಿ ಲಾಹೋರ್‌ ಕಮಿಷನರ್‌ ಮುಹಮ್ಮದ್‌ ಅಲಿ ರಾಂಧಾವಾ, ಲಾಹೋರ್‌ ಡೆಪ್ಯುಟಿ ಕಮಿಷನರ್‌ ರಫಿಯಾ ಹೈದರ್‌, ಡಿಐಜಿ (ಕಾರ್ಯಾಚರಣೆ ವಿಭಾಗ) ಸಾದಿಕ್‌ ದೊಗರ್‌ ಹಾಗೂ ವಿಶೇಷ ಪೊಲೀಸ್‌ ವರಿಷ್ಠಾಧಿಕಾರಿ (ಕಾರ್ಯಾಚರಣೆ) ಸೋಹೈಬ್‌ ಇದ್ದಾರೆ. ಇವರೆಲ್ಲರೂ ಇಮ್ರಾನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ’ ಪತ್ರಿಕೆ ಹೇಳಿದೆ.

‘ಇಮ್ರಾನ್‌ ಖಾನ್‌ ಅವರ ಮನೆಯನ್ನು ಸಂಪೂರ್ಣವಾಗಿ ಶೋಧ ಮಾಡಬೇಕೆಂದು ಆದೇಶ ಬಂದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ನೂರಾರು ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದಾಗಿ ಪಂಜಾಬ್‌ನ ಮಾಹಿತಿ ಸಚಿವ ಅಮೀರ್‌ ಮಿರ್‌ ಹೇಳಿದ್ದಾರೆ’ ಎಂದು ಪತ್ರಿಕೆ ಮಾಹಿತಿ ನೀಡಿದೆ.

ADVERTISEMENT

‘ಅಡಗಿಕೊಂಡಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚುವ ಉದ್ದೇಶದಿಂದ ಇಮ್ರಾನ್‌ ಅವರ ನಿವಾಸದ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರಗಳ ಸ್ಥಳಗಳನ್ನೂ ಒಳಗೊಂಡಂತೆ ಶೋಧ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ’ ಎಂದು ವಿವರಿಸಿದೆ.

‘ಇಮ್ರಾನ್‌ ಖಾನ್‌ ಅವರ ನಿವಾಸದಲ್ಲಿ 30ರಿಂದ 40 ಭಯೋತ್ಪಾದಕರು ಅಡಗಿಕೊಂಡಿದ್ದಾರೆ’ ಎಂದು ಬುಧವಾರ ಆರೋಪಿಸಿದ್ದ ಪಂಜಾಬ್‌ ಸರ್ಕಾರ, ದುಷ್ಕರ್ಮಿಗಳನ್ನು ಸರ್ಕಾರದ ವಶಕ್ಕೆ ಒಪ್ಪಿಸಲು ಇಮ್ರಾನ್‌ ಅವರ ನೇತೃತ್ವದ ತೆಹ್ರೀಕ್‌– ಎ– ಇನ್ಸಾಫ್‌ ಪಕ್ಷಕ್ಕೆ (ಪಿಟಿಐ) 24 ಗಂಟೆಗಳ ಕಾಲಾವಕಾಶವನ್ನೂ ನೀಡಿತ್ತು.

ಆದರೆ, ನಿಗದಿತ ಸಮಯದಲ್ಲಿ ಪಿಟಿಐ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಶೋಧ ನಡೆಯುತ್ತಿದೆ.

ಶೋಧ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿರುವ ಇಮ್ರಾನ್‌ ಅವರ ಭದ್ರತಾ ಅಧಿಕಾರಿ, ‘ಶೋಧ ನಡೆಸಲು ಬಂದವರು ಕೇವಲ ನೀರು ಮತ್ತು ಬಿಸ್ಕತ್‌ಗಳನ್ನು ಸೇವಿಸಿ ಹಿಂದಿರುಗಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.