ಶಫಾಖತ್ ಅಲಿ ಖಾನ್, ರಣದೀರ್ ಜೈಸ್ವಾಲ್
ಇಸ್ಲಾಮಾಬಾದ್: ‘ಪಾಕಿಸ್ತಾನ ನೆಲದಲ್ಲಿ ಭಾರತ ಭಯೋತ್ಪಾದನೆ ಹರಡುತ್ತಿದೆ. ಬಲೂಚಿಸ್ತಾನ ಅಸ್ಥಿರತೆಯಲ್ಲಿ ದೆಹಲಿಯ ಕೈವಾಡವಿರುವುದು ಸ್ಪಷ್ಟವಾಗಿದೆ’ ಎಂದು ಪಾಕಿಸ್ತಾನ ಗುರುವಾರ ಆರೋಪಿಸಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಶಫಾಖತ್ ಅಲಿ ಖಾನ್ ಮಾತನಾಡಿ, ‘ಭಾರತವು ತನ್ನ ಪ್ರಾಯೋಜಿತ ಜಾಗತಿಕ ಹತ್ಯೆ ಅಭಿಯಾನವನ್ನು ಆರಂಭಿಸಿದೆ’ ಎಂದು ಆರೋಪಿಸಿದ್ದಾರೆ.
‘ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹರಡುತ್ತಿರುವುದರಲ್ಲಿ ಭಾರತದ ಕೈವಾಡ ಸಾಬೀತಾಗಿದೆ. ಭಾರತದ ಕೃತ್ಯ ಪಾಕಿಸ್ತಾನದಲ್ಲಿ ಮಾತ್ರವಲ್ಲ, ಇಡೀ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ವ್ಯಾಪಕವಾಗಿದೆ. ಪಾಕಿಸ್ತಾನದ ವಿಷಯದಲ್ಲೂ ಬಲೂಚಿಸ್ತಾನವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ’ ಎಂದಿದ್ದಾರೆ.
ಮಾರ್ಚ್ 11ರಂದು ಬಲೂಚಿಸ್ತಾನದ ಬೊಲಾನ್ ಜಿಲ್ಲೆಯಲ್ಲಿ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಹಳಿ ತಪ್ಪಿಸಿ ದಾಳಿ ಮಾಡಿದ ಬಲೂಚಿಸ್ತಾನ ಲಿಬರೇಷನ್ ಆರ್ಮಿ (ಬಿಎಲ್‌ಎ) ಕೃತ್ಯದ ನಂತರ ಪಾಕಿಸ್ತಾನ ಈ ಆರೋಪ ಮಾಡಿದೆ. ಘಟನೆಯಲ್ಲಿ 21 ಪ್ರಯಾಣಿಕರನ್ನು ಹಾಗೂ ನಾಲ್ವರು ಅರೆಸೇನಾ ಪಡೆ ಭಯೋತ್ಪಾದಕರು ಕೊಂದಿದ್ದರು. ಇದಕ್ಕೂ ಪೂರ್ವದಲ್ಲಿ 33 ಭಯೋತ್ಪಾದಕರನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿತ್ತು.
‘ಜಾಫರ್ ಎಕ್ಸ್‌ಪ್ರೆಸ್ ಮೇಲಿನ ದಾಳಿಯನ್ನು ಭಾರತ ಎಂದೂ ಖಂಡಿಸಿಲ್ಲ’ ಎಂದು ಜಾಫರ್ ಆರೋಪಿಸಿದ್ದಾರೆ. ಕಳೆದ ವಾರ ಪಾಕಿಸ್ತಾನದ ಇಂಥದ್ದೇ ಆರೋಪಕ್ಕೆ ನವದೆಹಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು.
‘ಭಯೋತ್ಪಾದನೆಯ ಮುಖ್ಯ ಕೇಂದ್ರ ಎಲ್ಲಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಇತರರ ವಿರುದ್ಧ ಆರೋಪ ಮಾಡುವ ಮೊದಲು ಪಾಕಿಸ್ತಾನ ತನ್ನನ್ನು ತಾನು ಅವಲೋಕಿಸಿಕೊಳ್ಳುವುದು ಉತ್ತಮ’ ಎಂದು ಭಾರತ ವಿದೇಶಾಂಗ ಇಲಾಖೆ ವಕ್ತಾರ ರಣದೀರ್ ಜೈಸ್ವಾಲ್ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.