ADVERTISEMENT

ಅಮೆರಿಕದಲ್ಲಿ ನಿಂತು ಪ್ರಪಂಚಕ್ಕೇ ಅಣುಬಾಂಬ್ ಬೆದರಿಕೆ ಹಾಕಿದ ಪಾಕ್ ಜನರಲ್ ಮುನೀರ್!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 6:45 IST
Last Updated 11 ಆಗಸ್ಟ್ 2025, 6:45 IST
<div class="paragraphs"><p>ಅಮೆರಿಕದ ಸೇನಾಧಿಕಾರಿ ಜೊತೆ ಮುನೀರ್, ಟ್ರಂಪ್</p></div>

ಅಮೆರಿಕದ ಸೇನಾಧಿಕಾರಿ ಜೊತೆ ಮುನೀರ್, ಟ್ರಂಪ್

   

ನ್ಯೂಯಾರ್ಕ್: ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್‌ ಅಮೆರಿಕದ ನೆಲದಲ್ಲಿ ನಿಂತು ಭಾರತ ವಿರೋಧಿ ಹೇಳಿಕೆ ನೀಡಿರುವುದಲ್ಲದೇ ಪ್ರಪಂಚಕ್ಕೇ ಅಣು ಬಾಂಬ್ ಬೆದರಿಕೆ ಹಾಕಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಪ್ಲೊರಿಡಾದ ಟಾಂಪಾದಲ್ಲಿ ಪಾಕ್ ಮೂಲದ ಅಮೆರಿಕನ್ ಉದ್ಯಮಿ ಅದ್ನಾನ್ ಅಸಾದ್ ಎಂಬುವರು ಆಯೋಜಿಸಿದ್ದ ಸ್ನೇಹಕೂಟ ಹಾಗೂ ವಲಸಿಗರ ಸಭೆಯಲ್ಲಿ ಭಾಗಿಯಾಗಿದ್ದ ಮುನೀರ್ ಈ ಮಾತುಗಳನ್ನು ಆಡಿದ್ದಾರೆ ಎಂಬ ವರದಿಗಳು ಬಂದಿವೆ.

ADVERTISEMENT

‘ನಾವು ಸಹ ಅಣ್ವಸ್ತ್ರಗಳನ್ನು ಹೊಂದಿದ್ದೇವೆ. ಒಂದು ವೇಳೆ ಯುದ್ಧಗಳು ನಡೆದು ನಾವು ಸೋತು ಹೋಗುತ್ತೇವೆ ಎನ್ನುವುದಾದರೆ ಆಗ ಅರ್ಧ ಪ್ರಪಂಚವನ್ನೇ ಮುಳುಗಿಸಿ ಹೋಗುತ್ತೇವೆ’ ಎಂದು ಅವರು ಪರೋಕ್ಷವಾಗಿ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

‘ಇಂಡಸ್ ನದಿ (ಸಿಂಧೂ ನದಿ) ಭಾರತದ ಸ್ವತ್ತಲ್ಲ. ಅವರು ನದಿ ನೀರನ್ನು ತಡೆದಿದ್ದಾರೆ. ಡ್ಯಾಮ್ ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಕಟ್ಟಲಿ ನೋಡೋಣ, ಆಗ ನಮ್ಮ ಹತ್ತೇ ಹತ್ತು ಮಿಸೈಲ್‌ಗಳಿಂದ ಡ್ಯಾಮ್‌ ಅನ್ನು ಪುಡಿಗಟ್ಟುತ್ತೇವೆ’ ಎಂದೂ ಹೇಳಿದ್ದಾರೆ.

‘ಸಿಂಧೂ ಜಲ ಒಪ್ಪಂದ ರದ್ದು ಮಾಡಿದ್ದಾರೆ. ಅದರಿಂದ ಅವರು ನಮ್ಮ 25 ಕೋಟಿ ಜನರನ್ನು ಹಸಿವಿಗೆ ಸಿಕ್ಕಿಸಬಹುದು. ಆದರೆ, ಸಿಂಧೂ ನದಿಗೆ ಡ್ಯಾಮ್ ಕಟ್ಟಿದರೆ ನಮ್ಮ ಹತ್ತಿರ ಮಿಸೈಲ್‌ಗಳಿಗೆ ಕೊರತೆ ಏನೂ ಇಲ್ಲವಲ್ಲ’ ಎಂದು ತನ್ನ ಜನರ ಎದುರು ಮುನೀರ್ ಮೈಲೇಜ್ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಇದೇ ಸಭೆಯಲ್ಲಿ ಮುನಿರ್ ‘ಪಾಕಿಸ್ತಾನದ ಪಾಲಿಗೆ ಕಾಶ್ಮೀರವು ಕಂಠನಾಳವಿದ್ದಂತೆ (ತಲೆಯಿಂದ ಹೃದಯಕ್ಕೆ ರಕ್ತ ಒಯ್ಯುವ ನಾಳ). ಕಾಶ್ಮೀರ ಪಾಕಿಸ್ತಾನಕ್ಕೇ ಸೇರಿದ್ದು’ ಎಂದು ಪುನರುಚ್ಚಿರಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

‘ಭಾರತ ಇತ್ತೀಚೆಗೆ ನಮ್ಮ ಜೊತೆ ಆರಂಭಿಸಿದ್ದ ಸಂಘರ್ಷದಲ್ಲಿ ತಕ್ಕ ಎದಿರೇಟು ನೀಡಿದ್ದೇವೆ. ಮತ್ತೆನಾದರೂ ಆಕ್ರಮಣ ಮಾಡಲು ಮುಂದಾದರೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು’ ಎಂದು ಮುನಿರ್ ಹೇಳಿರುವುದಾಗಿ ವರದಿ ತಿಳಿಸಿದೆ.

‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಾಯಕತ್ವವನ್ನು ನಾವು ಮೆಚ್ಚಿಕೊಂಡಿದ್ದೇವೆ. ಭಾರತ–ಪಾಕಿಸ್ತಾನ ಸಂಘರ್ಷ ಶಮನ ಸೇರಿದಂತೆ ಪ್ರಪಂಚದ ಅನೇಕ ಕಡೆ ಸಂಘರ್ಷಗಳನ್ನು ಶಮನ ಮಾಡಿರುವ ಅವರ ಕಾರ್ಯತಂತ್ರಕ್ಕೆ ನಾವು ತಲೆಬಾಗುತ್ತೇವೆ’ ಎಂದು ಟ್ರಂಪ್ ಅವರನ್ನು ಹಾಡಿಹೊಗಳಿದ್ದಾರೆ.

‘ಇತ್ತೀಚಿನ ಅಮೆರಿಕ–ಪಾಕ್ ವ್ಯಾಪಾರ ಒಪ್ಪಂದಗಳು ಭಾರಿ ಹೂಡಿಕೆಗಳನ್ನು ಆಕರ್ಷಿಸುವ ಶಕ್ತಿ ಇದೆ. ಅಂತರರಾಷ್ಟ್ರೀಯ ಸ್ನೇಹ–ಸಂಬಂಧಗಳ ಸುಧಾರಣೆಯಲ್ಲಿ ಇತ್ತೀಚೆಗೆ ಪಾಕಿಸ್ತಾನ ಭಾರಿ ಯಶಸ್ಸು ಸಾಧಿಸಿದೆ’ ಎಂದು ತನ್ನ ಜನರ ಎದುರು ಹೇಳಿದ್ದಾರೆ.

ಭಾರತದೊಂದಿಗಿನ ಸಂಘರ್ಷದ ಬಳಿಕ ಮುನೀರ್‌ ಅವರು ಅಮೆರಿಕಕ್ಕೆ ನೀಡಿದ ಎರಡನೇ ಭೇಟಿ ಇದಾಗಿದೆ. ಈ ಅಧಿಕೃತ ಭೇಟಿಯಲ್ಲಿ ರಾಜಕೀಯ ನಾಯಕರು ಮತ್ತು ಅಮೆರಿಕ ಸೇನೆಯ ಮುಖ್ಯಸ್ಥರನ್ನು ಅವರು ಭೇಟಿ ಮಾಡಿದ್ದಾರೆ.

ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಕಮಾಂಡರ್‌ ಜನರಲ್‌ ಮೈಕೆಲ್‌ ಇ. ಕುರಿಲ್ಲಾ ಅವರ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು, ದ್ವಿಪಕ್ಷೀಯ ಮಿಲಿಟರಿ ಸಹಕಾರ ಬಲಪಡಿಸಲು ಕುರಿಲ್ಲಾ ನೀಡಿದ್ದ ಕೊಡುಗೆಯನ್ನು ಸ್ಮರಿಸಿದ್ದಾರೆ. ಇದೇ ವೇಳೆ ಅಡ್ಮಿರಲ್‌ ಬ್ರಾಡ್‌ ಕೂಪರ್‌ ಭೇಟಿಯಾಗಿ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

ಅಮೆರಿಕ ಸೇನಾ ಪಡೆಯ ಜಂಟಿ ಮುಖ್ಯಸ್ಥ ಜನರಲ್‌ ಡಾನ್‌ ಕೇನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ ಪಾಕ್ ಜನರಲ್, ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಕೇನ್‌ ಅವರಿಗೆ ಆಹ್ವಾನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.