ADVERTISEMENT

ಗಡಿ ಸಂಘರ್ಷ ತಾರಕಕ್ಕೆ: ಅಫ್ಗಾನಿಸ್ತಾನ ವಿರುದ್ಧ ಯುದ್ಧ ಘೋಷಿಸಿದ ಪಾಕಿಸ್ತಾನ

ಏಜೆನ್ಸೀಸ್
Published 27 ಫೆಬ್ರುವರಿ 2026, 2:46 IST
Last Updated 27 ಫೆಬ್ರುವರಿ 2026, 2:46 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೃಪೆ: Gemini AI

ಇಸ್ಲಾಮಾಬಾದ್‌: ತಾಲಿಬಾನ್‌ ಆಡಳಿತವಿರುವ ಅಫ್ಗಾನಿಸ್ತಾನ ವಿರುದ್ಧ 'ಬಹಿರಂಗ ಯುದ್ಧ' ಆರಂಭಿಸಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್‌ ಶುಕ್ರವಾರ ಘೋಷಿಸಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ನಮ್ಮ ತಾಳ್ಮೆಯ ಮಿತಿ ಮೀರಿದೆ. ಇದೀಗ ನಮ್ಮ ಹಾಗೂ ನಿಮ್ಮ ನಡುವೆ ಬಹಿರಂಗ ಯುದ್ಧ ಆರಂಭವಾಗಿದೆ' ಎಂದು ಹೇಳಿದ್ದಾರೆ. 'ಇದು ತಾಲಿಬಾನ್‌ ಜೊತೆಗಿನ ಮುಖಾಮುಖಿ ಸಂಘರ್ಷ' ಎಂದೂ ಪ್ರಕಟಿಸಿದ್ದಾರೆ.

ಉಭಯ ದೇಶಗಳ ನಡುವಣ ಸಂಬಂಧ ಇತ್ತೀಚಿನ ತಿಂಗಳುಗಳಲ್ಲಿ ಹದಗೆಟ್ಟಿದೆ. ಉಭಯ ದೇಶಗಳ ನಡುವೆ ಗಡಿ ವಿಚಾರವಾಗಿ ತಿಂಗಳುಗಳಿಂದ ನಡೆಯುತ್ತಿರುವ ತಿಕ್ಕಾಟವು ಯುದ್ಧ ಘೋಷಣೆಗೆ ದಾರಿ ಮಾಡಿಕೊಟ್ಟಿದೆ.

ಇದರ ಬೆನ್ನಲ್ಲೇ, ಪಾಕಿಸ್ತಾನ ಸೇನೆಯು ಅಫ್ಗಾನಿಸ್ತಾನದ ಪ್ರಮುಖ ನಗರಗಳ ಮೇಲೆ ಬಾಂಬ್‌ ದಾಳಿ ನಡೆಸಿದೆ. 'ಕಾಬೂಲ್‌, ಪಕ್ತಿಯಾ ಪ್ರಾಂತ್ಯ ಹಾಗೂ ಕಂದಹಾರ್‌ನಲ್ಲಿ ತಾಲಿಬಾನ್‌ ರಕ್ಷಣಾ ಕೇಂದ್ರಗಳನ್ನು ಗುರಿಯಾಗಿಸಿದ್ದೆವು' ಎಂದು ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್‌ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಅಫ್ಗಾನಿಸ್ತಾನ ಪಡೆಗಳು ಪಾಕಿಸ್ತಾನ ಗಡಿಯತ್ತ ಗುರುವಾರ ರಾತ್ರಿ ದಾಳಿ ನಡೆಸಿದ್ದವು. ಪಾಕಿಸ್ತಾನ ಸೇನೆಯು ಈ ಹಿಂದೆ ನಡೆಸಿದ್ದ ವಾಯುದಾಳಿಗಳಿಗೆ ಪ್ರತೀಕಾರವಾಗಿ ದಾಳಿ ಮಾಡಿರುವುದಾಗಿ ತಾಲಿಬಾನ್‌ ಸರ್ಕಾರ ಪ್ರತಿಪಾದಿಸಿತ್ತು.

ಪಾಕಿಸ್ತಾನದಲ್ಲಿ ದಾಳಿ ಸಂಘಟಿಸುತ್ತಿರುವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಅಫ್ಗಾನಿಸ್ತಾನ ವಿಫಲವಾಗಿದೆ ಎಂದು ಇಸ್ಲಾಮಾಬಾದ್‌ ಆರೋಪಿಸುತ್ತಿದೆ. ಆದರೆ, ಆ ಆರೋಪಗಳನ್ನು ತಾಲಿಬಾನ್‌ ಸರ್ಕಾರ ನಿರಾಕರಿಸುತ್ತಾ ಬಂದಿದೆ.

ಕತಾರ್‌, ಟರ್ಕಿ ನೇತೃತ್ವದಲ್ಲಿ ಅಫ್ಗಾನ್‌ ಮತ್ತು ಪಾಕ್‌ ನಡುವಣ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿತ್ತು. ಅದರ ಮುಂದುವರಿದ ಭಾಗವಾಗಿ ಶಾಶ್ವತ ಒಪ್ಪಂದ ರೂಪಿಸುವ ಸಂಬಂಧ ಹಲವು ಸುತ್ತು ಮಾತುಕತೆ ನಡೆದಿದ್ದರೂ ಫಲಪ್ರದವಾಗಿಲ್ಲ.

ಇತ್ತೀಚಿನ ದಿನಗಳಲ್ಲಿ ನಡೆದ ಸಂಘರ್ಷಗಳಲ್ಲಿ ಎದುರಾಳಿ ಪಡೆಯ ಸಾಕಷ್ಟು ಯೋಧರನ್ನು ಹತ್ಯೆ ಮಾಡಿರುವುದಾಗಿ ಎರಡೂ ರಾಷ್ಟ್ರಗಳ ಸೇನೆಗಳು ಹೇಳಿಕೊಂಡಿವೆ.

ಎರಡು ಗಂಟೆ ಜೆಟ್‌ ಹಾರಾಟ

ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್‌ ಮೇಲೆ ಸುಮಾರು ಎರಡು ಗಂಟೆವರೆಗೆ ಯುದ್ಧವಿಮಾನಗಳು ಹಾರಾಟ ನಡೆಸಿವೆ. ಹಲವೆಡೆ ಸ್ಫೋಟ ಸಂಭವಿಸಿವೆ ಎಂದು ವರದಿಯಾಗಿದೆ.

ದೇಶದ ಸರ್ವೋಚ್ಚ ನಾಯಕ ಎನಿಸಿರುವ ತಾಲಿಬಾನ್‌ನ ಅತ್ಯುನ್ನತ ಧಾರ್ಮಿಕ ಮುಖಂಡ ಹೈಬತ್‌ಉಲ್ಲಾ ಅಖುಂಜಾದಾ ಅವರು ನೆಲೆಸಿರುವ ಕಂದಹಾರ್‌ ಮೇಲೂ ಫೈಟರ್ ಜೆಟ್‌ಗಳು ಹಾರಾಡಿವೆ. 

ಪಾಕಿಸ್ತಾನ ವಾಯುದಾಳಿಯನ್ನು ಖಾತ್ರಿಪಡಿಸಿರುವ ತಾಲಿಬಾನ್‌ ಸರ್ಕಾರದ ವಕ್ತಾರ ಝಬಿಹುಲ್ಲಾ ಮುಜಾಹಿದ್‌, ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದಿದ್ದಾರೆ.

70 ಉಗ್ರರ ಹತ್ಯೆ

ದೇಶದಲ್ಲಿ ಇತ್ತೀಚೆಗೆ ನಡೆ‌ದ ಬಂಡುಕೋರರ ದಾಳಿಗೆ ಪ್ರತೀಕಾರವಾಗಿ ಅಫ್ಗಾನಿಸ್ತಾನದ ಕನಿಷ್ಠ ಏಳು ಭಯೋತ್ಪಾದಕ ಅಡಗುದಾಣಗಳ ಮೇಲೆ ವಾಯುದಾಳಿ ನಡೆಸಿರುವುದಾಗಿ ಭಾನುವಾರ ಹೇಳಿಕೊಂಡಿದ್ದ ಪಾಕಿಸ್ತಾನ, 70 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ತಿಳಿಸಿತ್ತು.

ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಪ್ರದೇಶದಲ್ಲಿ ಶನಿವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬ ಸೈನಿಕ ಮೃತಪಟ್ಟಿದ್ದರು. ಈ ದಾಳಿಯನ್ನು ಅಫ್ಗಾನಿಸ್ತಾನ ಮೂಲದ ಭಯೋತ್ಪಾದಕ ನಾಯಕರ ನಿರ್ದೇಶನದಂತೆ ನಡೆಲಾಗಿದೆ ಎಂದು ಪಾಕಿಸ್ತಾನ ಆರೋಪಿಸಿತ್ತು.

ಪಾಕಿಸ್ತಾನದ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಅಫ್ಗನ್ ಸರ್ಕಾರ ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.