ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು
ಎಕ್ಸ್ ಚಿತ್ರ
ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಹಿಂಸಾಚಾರವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಪ್ರತಿಭಟನಾಕಾರರು ಶನಿವಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಶಿಕ್ಷಣ, ಆರೋಗ್ಯ ಸೌಲಭ್ಯ ಸೇರಿದಂತೆ 38 ಅಂಶಗಳ ಬೇಡಿಕೆಗೆ ಪಟ್ಟು ಹಿಡಿದು ಜಮ್ಮು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ (JKJAAC) ಮುಖಂಡರು ಸೆ. 29ರಿಂದ ಬೀದಿಗಿಳಿದು ಹೋರಾಟ ನಡೆಸಲು ಕರೆ ನೀಡಿದ್ದರು. ಇದು ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಕನಿಷ್ಠ 10 ಜನ ಮೃತಪಟ್ಟು, ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿದ್ದರಿಂದ ಪ್ರಧಾನಿ ಶೆಹಬಾಜ್ ಶರೀಫ್ ಅವರು ಉನ್ನತ ಮಟ್ಟದ ಸಮಿತಿಯನ್ನು ಮುಜಫರಾಬಾದ್‌ಗೆ ಬುಧವಾರ ಕಳುಹಿಸಿದ್ದರು. ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದರು.
ಪಾಕಿಸ್ತಾನದ ಮಾಜಿ ಪ್ರಧಾನಿ ರಾಜಾ ಪರ್ವೇಜ್ ಅಶ್ರಫ್ (2012) ಅವರ ನೇತೃತ್ವದ ತಂಡವು ನಿರಂತರ ಸಂಧಾನ ನಡೆಸಿದ ಪರಿಣಾಮ ಶನಿವಾರ ನಸುಕಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ವಿಷಯವನ್ನು ಸಂಸದೀಯ ವ್ಯವಹಾರಗಳ ಸಚಿವ ತಾರೀಖ್ ಫಜಲ್ ಚೌಧರಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
‘ಕ್ರಿಯಾ ಸಮಿತಿಯು ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರತಿಭಟನಾಕಾರರು ತಮ್ಮ ಮನೆಗಳಿಗೆ ಮರಳಿದ್ದಾರೆ. ಎಲ್ಲಾ ರಸ್ತೆಗಳು ಈಗ ಸಂಚಾರಕ್ಕೆ ಮುಕ್ತವಾಗಿವೆ. ಇದು ಶಾಂತಿಯ ಜಯವಾಗಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಒಪ್ಪಂದದಲ್ಲಿ ಒಮ್ಮತಕ್ಕೆ ಬಂದ 25 ಅಂಶಗಳುಳ್ಳ ಪ್ರತಿಯನ್ನೂ ಹಂಚಿಕೊಂಡಿದ್ದಾರೆ. ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ, ಹಿಂಸಾಚಾರದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ಸಾವಿಗೆ ಕಾರಣರಾದವರ ವಿರುದ್ಧ ಭಯೋತ್ಪಾದನೆ ಕೃತ್ಯ ಪ್ರಕರಣ ದಾಖಲಿಸುವುದು, ಪೂಂಚ್ ಮತ್ತು ಮುಜಫರಾಬಾದ್‌ನಲ್ಲಿ ಎರಡು ಪ್ರತ್ಯೇಕ ಮಧ್ಯಂತರ ಮತ್ತು ಮಾಧ್ಯಮಿಕ ಶಿಕ್ಷಣ ಮಂಡಳಿಗಳನ್ನು ರಚಿಸುವುದು ಇದರಲ್ಲಿ ಸೇರಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪ್ರದೇಶಗಳಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಒಳಗೊಂಡಂತೆ ಉಚಿತ ಚಿಕಿತ್ಸೆ ಸೌಲಭ್ಯಕ್ಕಾಗಿ 15 ದಿನಗಳ ಒಳಗಾಗಿ ಆರೋಗ್ಯ ಕಾರ್ಡ್ ವಿತರಣೆ ಮತ್ತು ಪ್ರತಿ ಜಿಲ್ಲೆಯಲ್ಲೂ ಹಂತ ಹಂತವಾಗಿ ಸ್ಕ್ಯಾನಿಂಗ್ ಯಂತ್ರಗಳ ಅಳವಡಿಕೆ. ವಿದ್ಯುತ್ ಪೂರೈಕೆ ಉತ್ತಮಪಡಿಸಲು 10 ಶತಕೋಟಿ ಪಾಕಿಸ್ತಾನ ರೂಪಾಯಿ ನೀಡಲೂ ಅಲ್ಲಿನ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಸಚಿವರು ಹಾಗೂ ಸಲಹೆಗಾರರ ಸಂಖ್ಯೆ 20ಕ್ಕೆ ಸೀಮಿತಗೊಳಿಸಲು ಮತ್ತು ಕಾರ್ಯದರ್ಶಿಗಳ ಸಂಖ್ಯೆಯೂ 20 ಮೀರದಂತೆ ಹಾಗೂ ಕೆಲ ಇಲಾಖೆಗಳನ್ನು ಸರ್ಕಾರದ ಗಾತ್ರಕ್ಕೆ ಕುಗ್ಗಿಸಲು ಒಮ್ಮತ ಮೂಡಿದೆ. ಕಹೋರಿ–ಕಮ್ಸೇರ್ (3.7 ಕಿ.ಮೀ.) ಹಾಗೂ ನೀಲಂ ಕಣಿವೆ ಪ್ರದೇಶದ ಚಪ್ಲಾನಿ (0.6 ಕಿ.ಮೀ.) ಎರಡು ಸುರಂಗ ನಿರ್ಮಿಸಲು ಅಗತ್ಯವಿರುವ ಸಾಧ್ಯತಾ ವರದಿ ಸಿದ್ಧಪಡಿಸಲು ಪಾಕಿಸ್ತಾನ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಪಿಒಕೆ ಶಾಸನಸಭೆಯ ಸದಸ್ಯರ ಕುರಿತು ಕಾನೂನು ಮತ್ತು ಸಂವಿಧಾನ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲೂ ಸರ್ಕಾರ ಒಪ್ಪಿದೆ. ಮೀರಾಪುರದಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೂ ಸರ್ಕಾರ ಸೈ ಎಂದಿದೆ.
ಆಸ್ತಿ ಪರಭಾರೆ ತೆರಿಗೆಯನ್ನು ಮೂರು ತಿಂಗಳ ಒಳಗಾಗಿ ಪಂಜಾಬ್ ಅಥವಾ ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ಸರಿಸಮನಾಗಿ ಇರುವಂತೆ ಕ್ರಮ ಕೈಗೊಳ್ಳಲೂ ಉನ್ನತ ಮಟ್ಟದ ಸಮಿತಿ ಒಪ್ಪಿಕೊಂಡಿದೆ. ಜತೆಗೆ ಒಮ್ಮತಕ್ಕೆ ಬರಲಾದ ಈ ಎಲ್ಲಾ ಅಂಶಗಳನ್ನು ಕಾಲಮಿತಿಯೊಳಗೆ ಜಾರಿಮಾಡುವುದರ ಮೇಲುಸ್ತುವಾರಿಗೆ ಸಮಿತಿ ರಚಿಸಲೂ ಸರ್ಕಾರ ಒಪ್ಪಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.