ಕರಾಚಿ: ಅಪಹರಣಕ್ಕೊಳಗಾಗಿ, ಬಲವಂತದಿಂದ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾದ ಮೂರು ತಿಂಗಳ ನಂತರ ಸಿಂಧ್ ನ್ಯಾಯಾಲಯದ ಆದೇಶದಂತೆ 15 ವರ್ಷದ ಬಾಲಕಿ ಮರಳಿ ಕುಟುಂಬವನ್ನು ಸೇರಿದ್ದಾಳೆ ಎಂದು ಹಿಂದೂ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಕರಾಚಿಯಿಂದ 310 ಕಿ.ಮೀ. ದೂರದಲ್ಲಿರುವ ಉಮೆರ್‌ಕೋಟ್‌ನ ಆದೇಶದಂತೆ ಸುನೀತಾ ಕುಮಾರಿ ಮಹಾರಾಜ್ ಅವರು ಶನಿವಾರ ತಮ್ಮ ಕುಟುಂಬವನ್ನು ಸೇರಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಹಿಂದೂ ಸಮುದಾಯದ ಮುಖಂಡ ಶಿವ ಕಾಚಿ, ‘ಕುನ್ರಿ ಎಂಬ ಪ್ರದೇಶದಿಂದ ಸುನೀತಾ ಅವರನ್ನು ಅಪಹರಿಸಲಾಗಿತ್ತು. ನಂತರ ಅವರನ್ನು ಬಲವಂತದಿಂದ ಮತಾಂತರಗೊಳಿಸಲಾಗಿತ್ತು. ಮುಸ್ಲಿಂ ಸಮುದಾಯದ ವೃದ್ಧನೊಂದಿಗೆ ಮದುವೆಯನ್ನೂ ಮಾಡಿದ್ದರು. ಇಂಥ ಬಹಳಷ್ಟು ಪ್ರಕರಣಗಳು ಪಾಕಿಸ್ತಾನದಲ್ಲಿ ನಡೆಯುತ್ತಿವೆ. ಆದರೆ ಸುನೀತಾ ಅವರಂಥ ಕೆಲವೇ ಕೆಲವು ಯುವತಿಯರು ಕುಟುಂಬವನ್ನು ಮರಳಿ ಸೇರುತ್ತಿದ್ದಾರೆ’ ಎಂದಿದ್ದಾರೆ.
ಸುನೀತಾ ಪರ ವಕೀಲ ಚಂದ್ರ ಕೊಹ್ಲಿ ಅವರು ಮಾಹಿತಿ ನೀಡಿ, ‘ಇದೊಂದು ವ್ಯವಸ್ಥಿತ ಅಪಹರಣ ಪ್ರಕರಣವಾಗಿದೆ. ಇಲ್ಲಿ ಮತಾಂತರ ಮತ್ತು ಮದುವೆಗೆ ಬಲವಂತ ಮಾಡಲಾಗಿದೆ. ಸಿಂಧ್‌ನಲ್ಲಿ ನಿರಂತರವಾಗಿ ಹಿಂದೂ ಸಮುದಾಯವನ್ನು ಬೆದರಿಸಲಾಗುತ್ತಿದೆ. ಸುನೀತಾ ಪ್ರಕರಣದಲ್ಲಿ ಅವರ ಪಾಲಕರು ದೂರು ದಾಖಲಿಸಿದ್ದರು. ಪಾಲಕರು ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿ ಆಕೆಯನ್ನು ಸುರಕ್ಷಿತ ನೆಲೆಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದರು. ನ್ಯಾಯಾಲಯವು ಹಲವು ಸುತ್ತಿನ ವಿಚಾರಣೆ ನಡೆಸಿತು. ಅಪಹರಣ ಮತ್ತು ಬಲವಂತದ ಮತಾಂತರ ಮತ್ತು ಮದುವೆಯನ್ನು ಆಕೆ ನ್ಯಾಯಾಲಯಕ್ಕೆ ತಿಳಿಸಿದಳು’ ಎಂದಿದ್ದಾರೆ.
‘ಬಹಳಷ್ಟು ಪ್ರಕರಣಗಳಲ್ಲಿ ಅಪಹರಣಕ್ಕೊಳಗಾದ ಯುವತಿಯರ ಕುಟುಂಬದವರು ಆರ್ಥಿಕವಾಗಿ ಬಡವರಾಗಿರುತ್ತಾರೆ. ಜತೆಗೆ ಮಾಹಿತಿಯ ಕೊರತೆಯೂ ಇರುತ್ತದೆ. ಹೀಗಾಗಿ ಅವರು ನ್ಯಾಯಾಲಯದಲ್ಲಿ ಸೂಕ್ತ ಸಾಕ್ಷಾಧಾರಗಳನ್ನು ಒದಗಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಎದುರುಗಾರರ ನಕಲಿ ದಾಖಲೆಗಳೇ ಮೇಲುಗೈ ಸಾಧಿಸುತ್ತವೆ’ ಎಂದು ಕೊಹ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.