ADVERTISEMENT

ಫ್ರಾನ್ಸ್, ಥಾಯ್ಲೆಂಡ್‌ನಲ್ಲಿ ಪಾಕಿಸ್ತಾನದ ಐಎಸ್‌ಐ ದುಷ್ಕೃತ್ಯ ಜಾಲ: ವರದಿ

ಏಜೆನ್ಸೀಸ್
Published 23 ಆಗಸ್ಟ್ 2020, 8:24 IST
Last Updated 23 ಆಗಸ್ಟ್ 2020, 8:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಂಕಾಂಗ್: ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಯು ಫ್ರಾನ್ಸ್‌, ಥಾಯ್ಲೆಂಡ್ ಸೇರಿದಂತೆ ಅನೇಕ ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಪಾಕ್ ಮೂಲದ ಅಪರಾಧ ಸಂಘಟನೆಗಳ ನೆರವು ಪಡೆಯುತ್ತಿದೆ. ಆ ಮೂಲಕ ತನ್ನ ಕಾರ್ಯಸೂಚಿ ವಿಸ್ತರಿಸಲು ಯತ್ನಿಸುತ್ತಿದೆ ಎಂದು ‘ಗ್ಲೋಬಲ್ ವಾಚ್ ಅನಾಲಿಸಿಸ್’ ವರದಿ ಹೇಳಿದೆ.

ಇತ್ತೀಚೆಗೆ ಪಾಕ್‌ ಪ್ರಜೆ ಬಾಖರ್ ಶಾ ಎಂಬಾತನನ್ನು ಥಾಯ್ಲೆಂಡ್ ಪೊಲೀಸರು ಬಂಧಿಸಿದ್ದರು. ಆತ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಐಎಸ್‌ಐ ಪರ ಅಕ್ರಮ ಹಣ ವರ್ಗಾವಣೆಯನ್ನೂ ಮಾಡಿದ್ದ ಎನ್ನಲಾಗಿದೆ. ಈತನನ್ನು 2012ರಲ್ಲಿ ಚಿಯಾಂಗ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಎದುರು ನಡೆದಿದ್ದ ಅಮೆರಿಕ ವಿರೋಧಿ ಪ್ರತಿಭಟನೆ ವೇಳೆ ಥಾಯ್ಲೆಂಡ್ ಅಧಿಕಾರಿಗಳು ಮೊದಲು ಗಮನಿಸಿದ್ದರು. 2016ರಲ್ಲಿ ನಕಲಿ ಪಾಸ್‌ಪೋರ್ಟ್ ಜಾಲ ಬೇಧಿಸಿದ್ದ ಥಾಯ್ಲೆಂಡ್ ಪೊಲೀಸರಿಗೆ ಮತ್ತೆ ಆತ ಶಾಮೀಲಾಗಿರುವುದು ಗೊತ್ತಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಇರಾನಿ ಪ್ರಜೆ ಹಮೀಜ್ ರಾಜಾ ಜಾಫರಿ ಮತ್ತು ಐವರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿತ್ತು.

ಆರು ಮಂದಿ ಬಂಧಿತರು ನಕಲಿ ಪ್ರಯಾಣದ ದಾಖಲೆ ಪೂರೈಸುವುದು ಮತ್ತು ಮಾನವ ಕಳ್ಳಸಾಗಣೆಯಲ್ಲಿ ಶಾಮೀಲಾಗಿರುವುದು ತಿಳಿದುಬಂದಿತ್ತು. ಬ್ರಿಟನ್, ಫ್ರಾನ್ಸ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಅನೇಕ ದೇಶಗಳ ವಾಂಟೆಡ್ ಪಟ್ಟಿಯಲ್ಲಿ ಹಮೀಜ್ ಇರುವುದು ಬಳಿಕ ಬೆಳಕಿಗೆ ಬಂದಿತ್ತು.

ಹಮೀಜ್ ಮತ್ತು ಐವರು ಪಾಕಿಸ್ತಾನೀಯರು ಫೋರ್ಜರಿ ಮಾಡಿದ ಪಾಸ್‌ಪೋರ್ಟ್‌ಗಳನ್ನು ಪೂರೈಸುವ ಕೃತ್ಯ ಎಸಗುತ್ತಿದ್ದರು. ಅವುಗಳನ್ನು ಗಲ್ಫ್‌ ದೇಶಗಳ ಜನರಿಗೆ ಆಸ್ಟ್ರೇಲಿಯಾ ಮತ್ತು ಯುರೋಪ್‌ಗೆ ತೆಳರಳುವ ಸಲುವಾಗಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಬಂಧನದಲ್ಲಿರುವ ಪಾಕಿಸ್ತಾನಿ ಪ್ರಜೆ ಗೋಹರ್ ಜಮನ್‌ಗೆ ಬಾಖರ್ ಶಾ ಜತೆ ಆಪ್ತ ನಂಟಿರುವುದು ತನಿಖೆ ವೇಳೆ ತಿಳಿದುಬಂದಿತ್ತು.

ಪಾಕ್ ರಾಯಭಾರ ಕಚೇರಿ ಜತೆಗೂ ನಂಟು: ಬಾಖರ್ ಶಾ ಬ್ಯಾಂಕಾಕ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದ. ಆತನ ರೆಸ್ಟೋರೆಂಟ್‌ಗಳೇ ಪಾಕಿಸ್ತಾನಿ ಅಧಿಕಾರಿಗಳು ಸಭೆ ಸೇರುವ ಕೇಂದ್ರಗಳಾಗಿತ್ತು ಎಂಬುದೂ ತನಿಖೆಯಿಂದ ತಿಳಿದುಬಂದಿದೆ.

‘ಸ್ಥಳೀಯ ಪೊಲೀಸ್, ವಲಸೆ, ಕಸ್ಟಮ್ಸ್ ಮತ್ತು ವಿಮಾನಯಾನ ಸಂಸ್ಥೆಗಳಲ್ಲಿ ಪಾಕಿಸ್ತಾನೀಯರಿಗೆ ಸಂಭಾವ್ಯ ಸ್ವತ್ತುಗಳನ್ನು ಗುರುತಿಸುವುದು ಮತ್ತು ಚೈಂಗ್ ಮಾಯ್ ಮತ್ತು ಮೇ ಸೋಟ್ ಪ್ರದೇಶದಲ್ಲಿ ಮುಸ್ಲಿಂ ಸಮುದಾಯಗಳ ನಡುವೆ ಸಂಪರ್ಕಗಳನ್ನು ಬೆಳೆಸುವುದು ಬಾಖರ್ ಶಾನ ಮುಖ್ಯ ಕೆಲಸವಾಗಿತ್ತು ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.