
ಪ್ರಾತಿನಿಧಿಕ ಚಿತ್ರ
ಕೃಪೆ: Gemini AI
ಇಸ್ಲಾಮಾಬಾದ್: ಅಫ್ಗಾನಿಸ್ತಾನ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ತಾಲಿಬಾನ್ ಸಿಬ್ಬಂದಿ ಹಾಗೂ ಅದರ ಸಹ ಸಂಘಟನೆಗಳ ಸುಮಾರು 300 ಮಂದಿಯನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ತಿಳಿಸಿದೆ.
ತಾಲಿಬಾನ್ ಆಡಳಿತವಿರುವ ಅಫ್ಗಾನಿಸ್ತಾನದ 397 ಮಂದಿಯನ್ನು ಹತ್ಯೆ ಮಾಡಲಾಗಿದೆ. 450ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಹಿತಿ ಸಚಿವ ಅತಾವುಲ್ಲಾ ತರಾರ್ ಅವರು ಶನಿವಾರ ತಡರಾತ್ರಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಫ್ಗಾನಿಸ್ತಾನ ವಿರುದ್ಧದ ಘಜಬ್ ಲಿಲ್–ಹಕ್ ಕಾರ್ಯಾಚರಣೆ ವೇಳೆ, 135 ಟ್ಯಾಂಕ್‌ಗಳು ಹಾಗೂ ಶಸ್ತ್ರಸಜ್ಜಿತ ವಾಹನಗಳು, 89 ಶಿಬಿರಗಳನ್ನು ನಾಶಪಡಿಸಲಾಗಿದೆ. ಅಷ್ಟೇ ಅಲ್ಲದೆ, ಪಾಕ್ ವಾಯುಪಡೆಯು ಸುಮಾರು 29 ಸ್ಥಳಗಳನ್ನು ಗುರಿಯಾಗಿಸಿ ದಾಳಿಗೆ ಸನ್ನದ್ಧವಾಗಿದೆ ಎಂದೂ ಅವರು ತಿಳಿಸಿರುವುದಾಗಿ ವರದಿಯಾಗಿದೆ.
ಅಫ್ಘಾನ್ ಪಡೆಗಳು ಸುಮಾರು 2,600 ಕಿ.ಮೀ ಗಡಿಯುದ್ದಕ್ಕೂ 53 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಿದ್ದಕ್ಕೆ ಪ್ರತೀಕಾರವಾಗಿ ಕಾರ್ಯಾಚರಣೆ ಆರಂಭಿಸುತ್ತಿರುವುದಾಗಿ ಪಾಕಿಸ್ತಾನ ಹೇಳಿತ್ತು. 'ಬಹಿರಂಗ ಯುದ್ಧ' ಆರಂಭಿಸಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಶುಕ್ರವಾರ ಘೋಷಿಸಿದ್ದರು.
ಪಾಕಿಸ್ತಾನ ಅಥವಾ ಭಯೋತ್ಪಾದಕ ಸಂಘಟನೆಗಳು – ಎರಡರಲ್ಲಿ ಯಾವುದು ಬೇಕು ಎಂಬುದನ್ನು ತಾಲಿಬಾನ್ ಆಡಳಿತವು ಆಯ್ಕೆ ಮಾಡಿಕೊಳ್ಳಲಿ ಎಂದು ಪಾಕ್ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಅದೇ ದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.