ADVERTISEMENT

ಅಮೆರಿಕ ನಮ್ಮನ್ನು ಟಾಯ್ಲೆಟ್ ಪೇಪರ್‌ಗಿಂತ ಕೆಟ್ಟದಾಗಿ ಬಳಸಿಕೊಂಡಿದೆ: ಪಾಕ್ ಸಚಿವ

ಏಜೆನ್ಸೀಸ್
Published 11 ಫೆಬ್ರುವರಿ 2026, 8:07 IST
Last Updated 11 ಫೆಬ್ರುವರಿ 2026, 8:07 IST
<div class="paragraphs"><p>ಖವಾಜಾ ಆಸಿಫ್‌</p></div>

ಖವಾಜಾ ಆಸಿಫ್‌

   

ಇಸ್ಲಾಮಾಬಾದ್‌: ಅಮೆರಿಕವು ತನ್ನ ಕಾರ್ಯತಂತ್ರದ ಹಿತಾಸಕ್ತಿಗಳಿಗಾಗಿ ನಮ್ಮನ್ನು ‘ಟಾಯ್ಲೆಟ್ ಪೇಪರ್‌’ಗಿಂತ ಕೆಟ್ಟದಾಗಿ ಬಳಸಿಕೊಂಡಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್‌ ಆರೋಪಿಸಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಿದ ಆಸಿಫ್, ‘1999ರ ನಂತರ ವಿಶೇಷವಾಗಿ ಅಫ್ಗಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ನಮ್ಮ ನಿರ್ಧಾರದಿಂದ ದೇಶಕ್ಕೆ ಶಾಶ್ವತ ಹಾನಿಯನ್ನುಂಟು ಮಾಡಿದೆ’ ಎಂದಿದ್ದಾರೆ.

ADVERTISEMENT

ಅಮೆರಿಕದ ಬೆಂಬಲವನ್ನು ಗಂಭೀರ ತಪ್ಪು ಲೆಕ್ಕಾಚಾರವೆಂದು ಬಣ್ಣಿಸಿದ ಅವರು, ಇದರ ಪರಿಣಾಮಗಳನ್ನು ಪಾಕಿಸ್ತಾನ ದಶಕಗಳ ನಂತರವೂ ಎದುರಿಸುತ್ತಿದೆ ಎಂದು ಹೇಳಿದ್ದಾರೆ.

‘ಅಫ್ಗಾನಿಸ್ತಾನ ಸಂಘರ್ಷದಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆ ಧಾರ್ಮಿಕ ಹಿತಾಸಕ್ತಿಯಿಂದ ನಡೆಸಲ್ಪಟ್ಟಿದೆ ಎಂಬ ವಾದವನ್ನು ತಳ್ಳಿಹಾಕಿದ ಅವರು, ನಮ್ಮವರನ್ನು (ಪಾಕಿಸ್ತಾನಿಗಳನ್ನು) ಸಜ್ಜುಗೊಳಿಸಿ ಜಿಹಾದ್ ಬ್ಯಾನರ್ ಅಡಿಯಲ್ಲಿ ಹೋರಾಡಲು ಕಳುಹಿಸಲಾಗಿತ್ತು. ಇದು ದಾರಿತಪ್ಪಿಸುವ ಮತ್ತು ವಿನಾಶಕಾರಿ ಪ್ರಯತ್ನ’ ಎಂದು ಹೇಳಿದ್ದಾರೆ.

1980ರ ದಶಕದಲ್ಲಿ ಅಫ್ಗಾನಿಸ್ತಾನದಲ್ಲಿ ನಡೆದ ಸೋವಿಯತ್ ವಿರೋಧಿ ಯುದ್ಧವು ಧಾರ್ಮಿಕ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ ಅಮೆರಿಕದ ಭೌಗೋಳಿಕ ರಾಜಕೀಯ ಹಿತಾಸಕ್ತಿಗಳಿಂದ ನಿರ್ದೇಶಿಸಲ್ಪಟ್ಟಿತ್ತು. ಈ ಸಂದರ್ಭಗಳು ಎಂದಿಗೂ ಜಿಹಾದ್ ಘೋಷಣೆಗೆ ಅರ್ಹವಲ್ಲ ಎಂದಿದ್ದಾರೆ.

ಪಾಕಿಸ್ತಾನಕ್ಕೆ ತನ್ನದಲ್ಲದ ಸಂಘರ್ಷಗಳಲ್ಲಿ ಭಾಗವಹಿಸುವಿಕೆಯಿಂದಾಗಿ ದೀರ್ಘಕಾಲೀನ ಅಸ್ಥಿರತೆ ಮತ್ತು ಸಾಮಾಜಿಕ ಹಾನಿಯನ್ನು ಉಂಟುಮಾಡಿತು ಎಂದೂ ಅವರು ತಿಳಿಸಿದ್ದಾರೆ.

‘ಯೂಸ್‌ ಅಂಡ್‌ ಥ್ರೋ’ (ಬಳಸಿ, ಬಿಸಾಕು)...

2021ರ ಸೆಪ್ಟೆಂಬರ್ 11ರ ದಾಳಿಯ ನಂತರ ಅಮೆರಿಕದೊಂದಿಗೆ ಮರು ಹೊಂದಾಣಿಕೆ ಮಾಡಿಕೊಂಡಿದ್ದರಿಂದಾಗಿ ಭಾರೀ ನಷ್ಟ ಅನುಭವಿಸುವಂತಾಯಿತು. ಮಿಲಿಟರಿ ಆಡಳಿತಗಾರರಾದ ದಿ. ಜಿಯಾ-ಉಲ್-ಹಕ್ ಮತ್ತು ದಿ. ಪರ್ವೇಜ್ ಮುಷರಫ್ ಅವರು ಪಾಕಿಸ್ತಾನವನ್ನು ಬಾಹ್ಯ ಯುದ್ಧಗಳಲ್ಲಿ ಸಿಲುಕಿಸಿದ್ದಾರೆ. ದೇಶವು ಇದರ ಪರಿಣಾಮವನ್ನು ದೀರ್ಘಕಾಲದವರೆಗೆ ಅನುಭವಿಸುವಂತಾಯಿತು ಎಂದು ಆಸಿಫ್ ಉಲ್ಲೇಖಿಸಿದ್ದಾರೆ.

2001ರ ನಂತರದ ಅವಧಿಯನ್ನು ಉಲ್ಲೇಖಿಸಿ, ಪಾಕಿಸ್ತಾನವು ಅಮೆರಿಕ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಬೆಂಬಲಿಸಲು ತಾಲಿಬಾನ್ ವಿರುದ್ಧ ತಿರುಗಿ ಬಿದ್ದಿತ್ತು. ಆದರೆ, ಪಾಕಿಸ್ತಾನವು ಹಿಂಸಾಚಾರ, ಆರ್ಥಿಕ ಒತ್ತಡದಲ್ಲಿ ಸಿಲುಕಿತ್ತು. ಅಮೆರಿಕ ಅಂತಿಮವಾಗಿ ಹಿಂದೆ ಸರಿಯಿತು ಎಂದು ಅವರು ಹೇಳಿದ್ದಾರೆ.

ನಾವು ಅನುಭವಿಸಿದ ನಷ್ಟವನ್ನು ಎಂದಿಗೂ ಸರಿದೂಗಿಸಲು ಸಾಧ್ಯವಿಲ್ಲ. ಈ ಹಿಂದೆ ತೆಗೆದುಕೊಂಡ ನಿರ್ಧಾರಗಳನ್ನು ಬದಲಾಯಿಸಲಾಗದ ತಪ್ಪುಗಳು ಎಂದಿರುವ ಅವರು, ‘ಅಮೆರಿಕ, ಪಾಕಿಸ್ತಾನವನ್ನು ಇತರರು ನಡೆಸುವ ಸಂಘರ್ಷಗಳಲ್ಲಿ ಒಂದು ಕೈಗೊಂಬೆಯನ್ನಾಗಿ ಬಳಸಿಕೊಂಡಿತು’ ಎಂದು ಬೇಸರ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.