ಲಂಡನ್‌ನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಮುಂದೆ ಪ್ರತಿಭಟಿಸುತ್ತಿದ್ದ ಅನಿವಾಸಿ ಭಾರತೀಯ ಸಮೂಹದ ಮುಂದೆ ಪಾಕ್ ಅಧಿಕಾರಿಯೊಬ್ಬರು ಕತ್ತು ಸೀಳುವ ಸನ್ನೆ ಮಾಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅವರು ಈ ರೀತಿಯಾಗಿ ವರ್ತಿಸಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಕೈಯಲ್ಲಿ ಪೋಸ್ಟರ್ ಹಿಡಿದುಕೊಂಡಿದ್ದು, ಅದರಲ್ಲಿ ಭಾರತೀಯ ವಾಯುಪಡೆಯ ಯೋಧ ಅಭಿನಂದನ್ ವರ್ತಮಾನ್ ಅವರ ಚಿತ್ರವಿದೆ. ಚಿತ್ರದ ಸಮೀಪ ‘Cahai is fantastic’ ಎಂದು ಬರೆಯಲಾಗಿದೆ. ಹೈಕಮಿಷನ್ ಕಟ್ಟಡದ ಮುಂದಿರುವ ಧ್ವಜಸ್ತಂಭದ ಬಳಿ ನಿಂತಿದ್ದ ಅಧಿಕಾರಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ‘ಕತ್ತು ಸೀಳುತ್ತೇವೆ’ ಎಂಬ ಸನ್ನೆ ಮಾಡಿದ್ದಾರೆ.
ಸನ್ನೆ ಮಾಡಿದ ಅಧಿಕಾರಿಯನ್ನು ಕರ್ನಲ್ ತೈಮೂರ್ ರಾಹತ್ ಎಂದು ಗುರುತಿಸಲಾಗಿದ್ದು, ಪಾಕ್ ಸೇನೆಯ ಅಧಿಕಾರಿಯೂ ಆಗಿರುವ ಅವರು, ಲಂಡನ್ ಹೈಕಮಿನ್‌ನ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೈಕಮಿಷನ್ ಕಟ್ಟಡದ ಬಾಲ್ಕನಿಯಲ್ಲಿ ನಿಂತು ಉದ್ರೇಕಕಾರಿ ಸನ್ನೆ ಮಾಡಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದೆ.
ಬಾಲ್ಕನಿಯಲ್ಲಿ ‘ಕಾಶ್ಮೀರಿಗಳೊಂದಿಗೆ ಪಾಕಿಸ್ತಾನ ನಿಲ್ಲುತ್ತದೆ’ ಎಂದು ದೊಡ್ಡ ಬೋರ್ಡ್ ನೇತು ಹಾಕಲಾಗಿದೆ.
ಪಾಕಿಸ್ತಾನಿ ಪ್ರತಿಭಟನಾಕಾರರು ಲೌಡ್ ಸ್ಪೀಕರ್‌ನಲ್ಲಿ ದೇಶಭಕ್ತಿ ಗೀತೆ ಹಾಡುವುದೂ ವಿಡಿಯೊದಲ್ಲಿ ದಾಖಲಾಗಿದೆ.
ಸುಮಾರು 500 ಮಂದಿ ಭಾರತೀಯ ಸಮುದಾಯದ ಸದಸ್ಯರು ಭಾರತದ ಧ್ವಜ, ಭಿತ್ತಿ ಪತ್ರ ಹಿಡಿದು, ಘೋಷಣೆ ಕೂಗಿ ಪ್ರತಿಭಟಿಸಿದ್ದಾರೆ. ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
‘ನಾವು ಬೇಸರಗೊಂಡಿದ್ದೇವೆ, ಕೋಪಗೊಂಡಿದ್ದೇವೆ. ನಾವು ನಮ್ಮ ಆಕ್ರೋಶವನ್ನು ಹೊರಹಾಕಲು ಇಲ್ಲಿ ಸೇರಿದ್ದೇವೆ’ ಎಂದು ಓರ್ವ ಪ್ರತಿಭಟನಾಕಾರ ಪ್ರತಿಕ್ರಿಯಿಸಿದ್ದನ್ನು ‘ಎನ್‌ಡಿಟಿವಿ’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.