ADVERTISEMENT

ಪಾಕಿಸ್ತಾನದಲ್ಲಿ ಫ್ರಾನ್ಸ್‌ ವಿರುದ್ಧ ಪ್ರತಿಭಟನೆ: ‍ಸಾಮಾಜಿಕ ಜಾಲತಾಣಗಳು ಸ್ಥಗಿತ

ಪಿಟಿಐ
Published 16 ಏಪ್ರಿಲ್ 2021, 10:35 IST
Last Updated 16 ಏಪ್ರಿಲ್ 2021, 10:35 IST
ಪಾಕಿಸ್ತಾನದಲ್ಲಿ ಫ್ರಾನ್ಸ್‌ನ ರಾಯಭಾರಿ ಕಚೇರಿ ಮುಂದೆ ನಿಂತಿರುವ ಪೊಲೀಸರು  –ಎಎಫ್‌‍ಪಿ ಚಿತ್ರ
ಪಾಕಿಸ್ತಾನದಲ್ಲಿ ಫ್ರಾನ್ಸ್‌ನ ರಾಯಭಾರಿ ಕಚೇರಿ ಮುಂದೆ ನಿಂತಿರುವ ಪೊಲೀಸರು  –ಎಎಫ್‌‍ಪಿ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಪ್ರತಿಭಟನೆಯನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

‘ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾಮಾಜಿಕ ಜಾಲತಾಣಗಳನ್ನು ಸ್ಥಗಿತಗೊಳಿಸುವಂತೆ’ ಆಂತರಿಕ ಸಚಿವಾಲಯವು ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರಕ್ಕೆ (ಪಿಟಿಎ) ನಿರ್ದೇಶನ ನೀಡಿದೆ.

ಕಳೆದ ವರ್ಷ ಫ್ರಾನ್ಸ್‌ನಲ್ಲಿ ಧರ್ಮಕ್ಕೆ ಸಂಬಂಧಿಸಿ ಅವಹೇಳನಕಾರಿ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸಲಾಗಿತ್ತು. ಹಾಗಾಗಿ ಪಾಕಿಸ್ತಾನದಲ್ಲಿರುವ ಫ್ರಾನ್ಸ್‌ನ ರಾಯಭಾರಿಯನ್ನು ಹೊರಹಾಕುವಂತೆ ಆಗ್ರಹಿಸಿ ತೆಹ್ರೀಕ್-ಇ-ಲಬೈಕ್ ಪಾಕಿಸ್ತಾನ(ಟಿಎಲ್‌ಪಿ) ಸಂಘಟನೆಯು ಕಳೆದ ಮೂರು ದಿನಗಳಿಂದ ಪ್ರತಿಭಟಿಸುತ್ತಿದೆ.

ADVERTISEMENT

ಈ ಪ್ರತಿಭಟನೆಯು ಹಿಂಸಾತ್ಮಾಕ ರೂಪ ಪಡೆದಿದ್ದು, ಭದ್ರತಾ ಪಡೆ ಮತ್ತು ಟಿಎಲ್‌ಪಿ ಬೆಂಬಲಿಗರ ನಡುವೆ ಘರ್ಷಣೆ ಏರ್ಪಟ್ಟಿದೆ. ಇದರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರವು ತೆಹ್ರೀಕ್-ಇ-ಲಬೈಕ್ ಪಾಕಿಸ್ತಾನ ಸಂಘಟನೆಯನ್ನು ಗುರುವಾರ ನಿಷೇಧಿಸಿದೆ.

ಅಲ್ಲದೆ ಸೋಮವಾರ ಟಿಎಲ್‌ಪಿ ಮುಖ್ಯಸ್ಥ ಸಾದ್‌ ಹುಸೈನ್‌ ರಿಜ್ವಿಯನ್ನು ಬಂಧಿಸಲಾಗಿದ್ದು, ಇದನ್ನು ಖಂಡಿಸಿ ಟಿಎಲ್‌ಪಿಯು ರಾಷ್ಟ್ರವ್ಯಾಪ್ತಿ ಪ್ರತಿಭಟನೆಗೆ ಕರೆ ನೀಡಿದೆ.

‘ಪ್ರತಿಭಟನೆಗಳನ್ನು ಆಯೋಜಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಯೂಟ್ಯೂಬ್‌, ಟೆಲಿಗ್ರಾಂ ಅನ್ನು ನಿರ್ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.